ಮುರಗುಂಡಿ: ಎಲ್ಲೆಲ್ಲಿಯೂ ಭಂಡಾರ, ಬಂದ ಭಕ್ತಾದಿಗಳು, ನೆಲದ ಹಾಸು, ಪಲ್ಲಕ್ಕಿ, ದೇವಸ್ಥಾನದ ಅವರಣ, ಎಲ್ಲವೂ ಭಂಡಾರಮಯ. ಈ ದೃಶ್ಯ ಕಂಡಿದ್ದು ಇಲ್ಲಿನ ಮುರಸಿದ್ದೇಶ್ವರ ಜಾತ್ರೆಯಲ್ಲಿ.
ಸುತ್ತಮುತ್ತಲಿನ ಚಿಕ್ಕಟ್ಟಿ, ಕೆರೂರ, ಜಂಬಗಿ, ಸಂಬರಗಿ, ತಂಗಡಿ, ಶಿನಾಳ, ಚಿಕ್ಕೋಡಿ, ಅಥಣಿ ಹಾಗೂ ವಿಜಯಪುರ, ಬೆಳಗಾವಿ, ಮಹಾರಾಷ್ಟ್ರದ ಉಮರಾಣಿ, ಪಂಡರಪುರ, ಇನ್ನೂ ಅನೇಕ ಗ್ರಾಮಗಳಿಂದ ಸಾಕಷ್ಟು ಭಕ್ತರು ಪಾಲ್ಗೊಂಡಿದ್ದರು
ರಾತ್ರಿ ಮುರಸಿದ್ದೇಶ್ವರ ದೇವರ ಪ್ರತಿಮೆಯನ್ನು ದೇವರ ಕುದುರೆಯೊಂದಿಗೆ ಹಸಿ ಬಟ್ಟೆಯಮೇಲೆ ಮೆರವಣಿಗೆಯ ಮೂಲಕ ಡೊಳ್ಳು ಬಾರಿಸುವುದರೊಂದಿಗೆ ಕರೆದುಕೊಂಡು ಬಂದ ನಂತರ ಮುರಸಿದ್ದೇಶ್ವರನಿಗೆ ಅಭಿಷೇಕ, ನೈವೇದ್ಯ ಮಾಡಿ ಜಾತ್ರೆಯ ಮಹತ್ವದ ಘಟ್ಟವಾದ ಸಮೀನ ತಿರುಗುವುದು ನಡೆಯಿತು. ಆ ಸಮಯದಲ್ಲಿ ಭಕ್ತಾದಿಗಳು ಭಂಡಾರ ಹಾರಿಸಿ, ಡೊಳ್ಳು, ದಟ್ಟಿ ಕುಣಿತದೊಂದಿಗೆ ಪಲ್ಲಕ್ಕಿಯನ್ನು ಹೊತ್ತು ವಿಶಾಲ ಪ್ರಾಂಗಣದ ಐದು ಸುತ್ತು ಪ್ರದಕ್ಷಿಣೆ ಹಾಕಿದರು.
ನಂತರ ವಿಜಯಪುರದಿಂದ ಪಾದಯಾತ್ರೆಯ ಮೂಲಕ ಹೂವಿನ ಹೆಡಗೆ ತಂದು ಅದನ್ನು ಮುರಸಿದ್ದೇಶ್ವರನಿಗೆ ಅರ್ಪಣೆ ಮಾಡಿ, ವಿಶೇಷ ಪೂಜೆಯೊಂದಿಗೆ ಮುರಸಿದ್ದೇಶ್ವರ ದೇವರ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾದವು.
ಮುರಸಿದ್ದೇಶ್ವರ ಜಾತ್ರೆಯ ವಿಶೇಷವಾದ ದೇವರನುಡಿ ಹೇಳುವುದು ಕವಲು ಹಚ್ಚುವುದು ನಡೆಯಿತು, ಈ ಬಾರಿ ಮಳೆ, ಬೆಳೆ, ಪ್ರಕೃತಿ ವಿಕೋಪ ಮುಂತಾದವುಗಳ ಕುರಿತಾಗಿ ದೇವರ ನುಡಿ ಹೇಳಲಾಯಿತು.
ಜಾತ್ರಾ ಕಮಿಟಿಯಿಂದ ನೀರು ಹಾಗೂ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರಿಗೂ ಅನ್ನ ಸಂತರ್ಪಣೆ ನಡೆಯಿತು. ಜಾತ್ರಾ ಕಮಿಟಿಯಿಂದ ಸ್ವತ್ಛತೆಯ ವ್ಯವಸ್ಥೆ ಹಾಗೂ ಭದ್ರತೆಯ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಶೇಷ ರೀತಿಯ ವಿದ್ಯುತ್ ದೀಪದ ಅಲಂಕಾರ ದೇವಸ್ಥಾನವನ್ನು ಆಕರ್ಷಕವನ್ನಾಗಿಸಿತ್ತು. ಮುರಸಿದ್ದೇಶ್ವರ ದೇವರನ್ನು ಮತ್ತೆ ಪುರಪ್ರವೇಶ ಮಾಡಿಸಿದ ನಂತರ ಜಾತ್ರೆ ಸಂಪನ್ನಗೊಂಡಿತು.