Advertisement

ವಿಗ್ರಹಗಳ ಪ್ರತಿಷ್ಠಾಪನೆ ಮಹೋತ್ಸವ

11:51 AM Apr 23, 2019 | pallavi |

ಕಲಘಟಗಿ: ಪಟ್ಟಣದ ಎಲಿಪೇಟೆಯ ರಾಘವೇಂದ್ರ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಸನ್ನಿಧಿಯ ವಾಸ್ತು ಪೂಜೆ, ಶ್ರೀ ಪಂಚಮುಖೀ ಆಂಜನೇಯ, ಶ್ರೀ ಲಕ್ಷ್ಮ್ಮೀ, ಶ್ರೀ ಗಣೇಶ ಮತ್ತು ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವ ಏ.23ರಿಂದ ಮೂರು ದಿನಗಳ ಕಾಲ ಜರುಗಲಿದೆ.

Advertisement

ಕರೆದಲ್ಲಿಗೆ ಬರುವಾ ಎಂಬ ಹರಿದಾಸರ ವಾಣಿಯಂತೆ ಮೃತ್ತಿಕಾ ಬೃಂದಾವನ ರೂಪದಿಂದ, ವಿಗ್ರಹ ರೂಪದಿಂದ, ಚಿತ್ರಪಟ ರೂಪದಿಂದ ಭಕ್ತರು ಕರೆದ ಸ್ಥಳದಲ್ಲಿ ಸನ್ನಿಧಾನವನ್ನಿಟ್ಟು ಅನುಗ್ರಹಿಸುತ್ತಾರೆಂಬ ವಿಶ್ವಾಸ, ಶ್ರದ್ಧಾ ಭಕ್ತಿಯಿಂದ ಕಲಘಟಗಿಯಲ್ಲೂ ಶ್ರೀ ಗುರುರಾಜರ ಪಂಚಮುಖೀ ಆಂಜನೇಯ ಸನ್ನಿಧಾನವನ್ನು ಪ್ರತಿಷ್ಠಾಪಿಸಬೇಕೆಂದು ಪಟ್ಟಣದ ಸ್ನೇಹಾ ಜ್ಯುವೆಲರ್ಸ್‌ನ ಗಣೇಶ ಶ್ರೀ ನಿವಾಸ ವೆರ್ಣೇಕರ ಮತ್ತು ಸಹೋದರರು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರನ್ನು ಪ್ರಾರ್ಥಿಸಿದ್ದರಿಂದ ಏ.25 ವಿಕಾರಿ ಸಂವತ್ಸರ ಚೈತ್ರ ಕೃಷ್ಣ ಪಕ್ಷ ಷಷ್ಠಿ ಗುರುವಾರ ಬೆಳಿಗ್ಗೆ 10.30 ರಿಂದ 11.55 ರ ವರೆಗೆ ನಡೆಯುವ ಶುಭ ಮುಹೂರ್ತದಲ್ಲಿ ಪ್ರತಿಷ್ಠಾಪಿಸಲು ಅನುಗ್ರಹಿಸಿದ್ದಾರೆ. ಅಲ್ಲದೇ ಶ್ರೀಗಳೇ ವಿಗ್ರಹಗಳ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಮಂಗಳಾರತಿ ಮಾಡಿದ ನಂತರ ಅನುಗ್ರಹ ಸಂದೇಶ ಬೋಧಿಸುವರು.

ಏ. 23 ಮಂಗಳವಾರ ಸಂಜೆ 6 ಗಂಟೆಗೆ ಜರುಗಬೇಕಿದ್ದ ವಿಗ್ರಹಗಳ ಮೆರವಣಿಗೆಯನ್ನು ಲೋಕಸಭಾ ಮತದಾನ ನಿಮಿತ್ಯ 24 ಬುಧವಾರ ಬೆಳಿಗ್ಗೆ 7 ಘಂಟೆಗೆ ಪಟ್ಟಣದ ಆಂಜನೇಯ ಸರ್ಕಲ್ನಿಂದ ಶ್ರೀ ಗ್ರಾಮದೇವಿ ದೇವಸ್ಥಾನ ಮಾರ್ಗವಾಗಿ ಸನ್ನಿಧಿವರೆಗೆ ವಿವಿಧ ಬಾಜಾ ಭಜಂತ್ರಿಗಳೊಂದಿಗೆ ಸಾಗಲಿದೆ. ನಂತರ ಸನ್ನಿಧಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಪ್ರತಿಷ್ಠಾಪನಾ ಪೂರ್ವಭಾವಿ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 5 ಗಂಟೆಯಿಂದ ಭಕ್ತಿ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.

ಏ.25ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಸುಭುದೇಂದ್ರ ತೀರ್ಥ ಸ್ವಾಮಿಗಳವರ ಆಗಮನವಾಗಲಿದ್ದು, ಪಟ್ಟಣದ ಶ್ರೀ ಬಾಲ ಮಾರುತಿ ಸರ್ಕಲ್ನಲ್ಲಿ ಶ್ರೀಗಳವರಿಗೆ ಪೂರ್ಣಕುಂಭ ಸ್ವಾಗತದಿಂದ ಬರಮಾಡಿಕೊಂಡು ಸನ್ನಿಧಾನದವರೆಗೆ ಶೋಭಾಯಾತ್ರೆ ನಡೆಸಲಾಗುವುದು. ನಂತರ ಶ್ರೀಗಳವರೇ ಶ್ರೀಪಂಚಮುಖೀ ಆಂಜನೇಯ, ಶ್ರೀಲಕ್ಷ್ಮೀ ಗಣೇಶ ಮತ್ತು ಶ್ರೀಗುರು ರಾಘವೇಂದ್ರ ಸ್ವಾಮಿಗಳವರ ವಿಗ್ರಹಗಳ ಪ್ರತಿಷ್ಠಾಪನೆ ನೆರವೇರಿಸಿ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ, ಮಂಗಳಾರತಿ ಮಾಡಿದ ನಂತರ ಅನುಗ್ರಹ ಸಂದೇಶ ಬೋಧಿಸುವರು. ನಂತರ ಮಹಾ ಪ್ರಸಾದ ಜರುಗಲಿದೆ.

ಅಂದು ಸಂಜೆ 5 ಗಂಟೆಗೆ ಜರುಗಲಿರುವ ಕಾರ್ಯಕ್ರಮದ ಸಾನಿಧ್ಯವನ್ನು ಹನ್ನೆರಡುಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು ವಹಿಸಿ ಅನುಗ್ರಹ ಸಂದೇಶಾಮೃತ ನೀಡುವರು. ಶ್ರೀ ವೇಣುಗೋಪಾಲ ಭಜನಾ ಮಂಡಳಿ ಮತ್ತು ಶ್ರೀ ಶಾರದಾ ಭಜನಾ ಮಂಡಳಿಯವರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಹನುಮ ಭಕ್ತ ವೃಂದದವರಿಂದ ಹನುಮಾನ ಚಾಲಿಸಾ ಪಠಣ ಕಾರ್ಯಕ್ರಮ ಜರುಗಲಿವೆ. ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಪಾದಂಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀಗುರು ರಾಘವೇಂದ್ರ ಸ್ವಾಮಿ ಟ್ರಸ್ಟ್‌ನವರು ವಿನಂತಿಸಿದ್ದಾರೆ.

Advertisement

ಲೋಕ ಕಲ್ಯಾಣಕ್ಕಾಗಿ ಭಗವಂತನ ಆದೇಶದಿಂದ ಪಂಚಮುಖಗಳಿಂದ ಅವತರಿಸಿದ ಆಂಜನೇ ಸನ್ನಿಧಾನವು ಮಂತ್ರಾಲಯಕ್ಕೆ ತುಂಬಾ ಹತ್ತಿರದಲ್ಲಿ ಕಂಗೊಳಿಸುತ್ತಲಿದೆ. ಅಂತಹ ಪಂಚಮುಖೀ ಆಂಜನೇಯನ ಸನ್ನಿಧಾನದಲ್ಲಿ ಕೆಲ ಕಾಲ ತಪಸ್ಸನ್ನು ಶ್ರೀ ರಾಘವೇಂದ್ರ ಸ್ವಾಮಿಗಳು ಮಾಡಿದ್ದಾರೆಂದು ಇತಿಹಾಸ ತಿಳಿಸುತ್ತಿದೆ. ಅದರಂತೆ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು ಮೊದಲು ಪ್ರಲಾØದ ರಾಜರಾಗಿ ನಂತರ ಶ್ರೀ ವ್ಯಾಸರಾಜರಾಗಿ ಅವತರಿಸಿ ಕೊನೆಯ ಅವತಾರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳೆಂದು ಪ್ರಸಿದ್ಧರಾಗಿ ಮಂತ್ರಾಲಯದಲ್ಲಿ ಸಶರೀರರಾಗಿ ಬೃಂದಾವನದಲ್ಲಿ ಪ್ರವೇಶ ಮಾಡಿ ಇಂದಿಗೂ ಬೃಂದಾವನದಲ್ಲಿದ್ದು, ನೊಂದು ಬಂದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುತ್ತಿದ್ದಾರೆ ಎಂಬ ಪ್ರತೀತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next