ಬ್ರಹ್ಮಾವರ: ಉಡುಪಿ ಜಿಲ್ಲಾದ್ಯಂತ ಕುಡುಬಿ ಮತ್ತು ಮರಾಠಿ ಸಮುದಾಯದವರು ಆಚರಿಸುವ ಹೋಳಿ ಹಬ್ಬ ಸೋಮವಾರದಿಂದ ಆರಂಭಗೊಂಡಿದ್ದು ಮಾ. 18ರ ಹೋಳಿ ಹುಣ್ಣಿಮೆ ದಿನ ಸಮಾಪನಗೊಳ್ಳಲಿದೆ.
ಸಮುದಾಯದವರ ಎಲ್ಲ ಕೂಡು ಕಟ್ಟುಗಳಲ್ಲೂ ಹೋಳಿ ಕುಣಿತಕ್ಕೆ ಗುರಿಕಾರರ ಮನೆಗಳಲ್ಲಿ ಚಾಲನೆ ನೀಡ ಲಾಯಿತು. ಬಳಿಕ ಆಯಾಯ ಗ್ರಾಮ ದೇವಸ್ಥಾನಗಳಲ್ಲಿ ಕೋಲಾಟ, ಗುಮ್ಮಟೆ ನೃತ್ಯದ ಮೂಲಕ ಪೂಜೆ ಸಲ್ಲಿಸಿದರು.
ಮಂದಾರ್ತಿ, ಕೊಕ್ಕರ್ಣೆ, ಹಾಲಾಡಿ, ಬೆಳ್ವೆ, ಬಾರಕೂರು, ಮುದ್ದೂರು, ಯಳಂತೂರು, ಶೇಡಿಮನೆ, ಹಿಲಿಯಾಣ, ಕಕ್ಕುಂಜೆ, ಉಡುಪಿ, ಬ್ರಹ್ಮಾವರ, ಹೆಬ್ರಿ, ಪೆರ್ಡೂರು, ಹಿರಿಯಡಕದ ಆಸುಪಾಸುಗಳಲ್ಲಿ ಕುಡುಬಿ, ಮರಾಠಿ ಮನೆತನ ಗಳಿದ್ದು ಇಲ್ಲೆಲ್ಲ ಹೋಳಿ ಹಬ್ಬವು ಈಗಾಗಲೇ ರಂಗು ಪಡೆದುಕೊಂಡಿದೆ.
ಹೋಳಿ ಕುಣಿತಕ್ಕೆ ವಿಶೇಷವಾದ ಮನ್ನಣೆಯಿದೆ. ತಲೆಗೆ ಅಬ್ಬಲಿಗೆ ಹೂವಿನಿಂದ ಮಾಡಿದ ಮುಂಡಾಸು, ಅದರ ಮೇಲೆ ಹಟ್ಟಿಮುದ್ದ ಹಕ್ಕಿಯ ಚೆಂದದ ಗರಿ, ಜತೆಗೆ ವಿಶೇಷವಾದ ಆಕರ್ಷಕ ಉಡುಪುಗಳು, ಮೈ ಮೇಲೆ ಬಿಳಿಯ ನಿಲುವಂಗಿ, ಅಂಗಿಯ ಮೇಲೆ ಬಣ್ಣ ಬಣ್ಣದ ದಾರ, ಕಾಲಿಗೆ ಗೆಜ್ಜೆ, ಕೈಯಲ್ಲಿ ಬಾರಿಸುವ ಗುಮ್ಮಟೆ ಇವು ವೇಷ ಭೂಷಣ, ಆರಾಧನೆಯ ವೈಶಿಷ್ಟ್ಯ. ಆರಾಧ್ಯ ದೇವ ಶ್ರೀ ಚೆನ್ನಮಲ್ಲಿಕಾರ್ಜುನನನ್ನು ಸ್ಮರಿಸಿ, ಹಾಡಿ ಕುಣಿಯುತ್ತಾರೆ.
ಈ ತಂಡದವರು ಶ್ರೀಕೃಷ್ಣ ಮಠ, ದೇವಸ್ಥಾನಗಳು, ಮನೆಮನೆಗಳಿಗೆ ತೆರಳಿ ಸೇವೆಯನ್ನು ಸಲ್ಲಿಸುತ್ತಾರೆ.