Advertisement

ಕುಕ್ಕೆಯಲ್ಲಿ ಸಂಭ್ರಮದ ಕಿರುಷಷ್ಠಿ ರಥೋತ್ಸವ

10:43 PM Jan 01, 2020 | Lakshmi GovindaRaj |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ ಸಂಭ್ರಮ ಸಡಗರದಿಂದ ನೆರವೇರಿತು. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಲಂಕೃತ ರಥದಲ್ಲಿ ದೇವರ ಉತ್ಸವ ರಥ ಬೀದಿಯಲ್ಲಿ ನಡೆಯಿತು. ರಥಾರೋಹಣದ ಬಳಿಕ ದೇಗುಲದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ದೇವರಿಗೆ ಪೂಜೆ ನೆರವೇರಿಸಿದರು.

Advertisement

ರಥಬೀದಿಯಲ್ಲಿ ರಥೋತ್ಸವ ಜರುಗಿದ ಬಳಿಕ ಸವಾರಿ ಮಂಟಪ ಬಳಿಯ ಕಟ್ಟೆಯಲ್ಲಿ ದೇವರಿಗೆ ಪೂಜೆ ನೆರವೇರಿತು. ದೇಗುಲದ ಆಡಳಿತಾಧಿಕಾರಿ ಎಂ.ಜೆ.ರೂಪಾ, ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್‌., ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲ್‌ ದೇಗುಲದ ಸಿಬ್ಬಂದಿ ರಥೋತ್ಸವದಲ್ಲಿ ಪಾಲ್ಗೊಂಡರು.

ಧರ್ಮಸ್ಥಳ, ಕೊಲ್ಲೂರಿನಲ್ಲಿ ಭಕ್ತ ಸಂದಣಿ
ಬೆಳ್ತಂಗಡಿ: ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತರ ದಟ್ಟಣೆ ಬುಧವಾರವೂ ಮುಂದುವರಿದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹೊಸ ವರ್ಷ ಶುಭಾರಂಭದ ದಿನ 50 ಸಾವಿರಕ್ಕೂ ಮಿಕ್ಕಿ ಭಕ್ತರು ದೇವರ ದರ್ಶನ ಪಡೆದು, ವಿಶೇಷ ಸೇವೆ ಸಲ್ಲಿಸಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ 15 ಸಾವಿರ ಮಂದಿ ದೇವಿಯ ದರ್ಶನ ಪಡೆದರು. ಹಲವು ಮಂದಿ ಪಾದಯಾತ್ರೆ ಸೇರಿದಂತೆ ಸೈಕಲ್‌ ಮೂಲಕವೂ ಧರ್ಮಸ್ಥಳಕ್ಕೆ ಬಂದು ಸೇವೆ ಸಲ್ಲಿಸಿದ್ದಾರೆ.

ನೂರಾರು ಮಂದಿ ಮುಡಿ ಅರ್ಪಿಸಿ (ತಲೆಕೂದಲು ತೆಗೆಸಿ) ನೇತ್ರಾವತಿಯಲ್ಲಿ ಪುಣ್ಯಸ್ನಾನಗೈದರು. ದೇವರ ದರ್ಶನದ ಬಳಿಕ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದರು.ಮಂಜೂಷಾ ವಸ್ತು ಸಂಗ್ರಹಾಲಯ, ಕಾರ್‌ ಮ್ಯೂಸಿಯಂ, ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ, ಭಗವಾನ್‌ ಬಾಹುಬಲಿ ಸ್ವಾಮಿ, ಅಣ್ಣಪಟ್ಟ ಬೆಟ್ಟ ವೀಕ್ಷಿಸಿದರು. ಭಕ್ತರು ಮಾಡಿದ್ದ ಪುಷ್ಪಾಲಂಕಾರ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next