Advertisement

ಹಬ್ಬ ಸಂತಸ-ಸಂಭ್ರಮದಿಂದ ಆಚರಿಸಿ

04:58 PM Aug 21, 2018 | Team Udayavani |

ದಾವಣಗೆರೆ: ಮುಸ್ಲಿಂ ಸಮುದಾಯ ಬಹು ದೊಡ್ಡ ಬಕ್ರೀದ್‌ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಲು ಸರ್ವರೂ ಸಹಕರಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಮನವಿ ಮಾಡಿದ್ದಾರೆ.
 
ಬಕ್ರೀದ್‌ ಹಿನ್ನೆಲೆಯಲ್ಲಿ ಬಡಾವಣಾ ಪೊಲೀಸ್‌ ಠಾಣಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ನಾಗರಿಕ ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಾವಣಗೆರೆಯಲ್ಲಿ ಎಲ್ಲ ಸಮುದಾಯಗಳ ಹಬ್ಬಗಳನ್ನ ಶಾಂತಿ, ಸೌಹಾರ್ದದ ವಾತಾವರಣದಲ್ಲಿ ಆಚರಿಸುತ್ತಿರುವುದಕ್ಕೆ ನಾಗರಿಕರ ಸಹಕಾರವೇ ಬಹು ಮುಖ್ಯ ಕಾರಣ. ಇನ್ನು ಮುಂದೆಯೂ ಇದೇ ವಾತಾವರಣ ಮುಂದುವರಿದುಕೊಂಡು ಹೋಗಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು. 

Advertisement

ಪ್ರತಿಯೊಂದು ಸಮುದಾಯ ಹಬ್ಬಗಳನ್ನ ಆಚರಿಸುವುದೇ ಸಂತಸ, ಸಂಭ್ರಮಕ್ಕೆ. ಹಬ್ಬಗಳು ಸದಾ ಸಂತಸದ ವಾತಾವರಣದಲ್ಲಿ ಆಚರಿಸುವಂತಾಗಬೇಕು. ಯಾವುದೇ ಸಮುದಾಯದವರೇ ಆಗಿರಲಿ ತಪ್ಪು ಮಾಡಿದಲ್ಲಿ ಶಿಕ್ಷೆ ಆನುಭವಿಸಬೇಕಾಗುತ್ತದೆ. ಸಮುದಾಯದ ಮುಖಂಡರು ತಪ್ಪು ಮಾಡಿದವರಿಗೆ ಬುದ್ಧಿ ಮಾತು ಹೇಳುವುದರಿಂದ ಮುಂದೆ ಅಂತಹವರಿಂದ ದೊಡ್ಡ ತಪ್ಪುಗಳಾಗುವುದು ತಪ್ಪಿಸಿದಂತಾಗುತ್ತದೆ. ದಾವಣಗೆರೆಯಲ್ಲಿ ಯಾವಾಗಲು ಶಾಂತಿ, ನೆಮ್ಮದಿ, ಸೌಹಾರ್ದತೆ ನೆಲಸಲು ಸಾಧ್ಯವಾಗುತ್ತದೆ ಎಂದು ಆಶಿಸಿದರು.

ತಂಜೀಮುಲ್‌ ಮುಸ್ಸ್ಲೀಂಮೀನ್‌ ಫಂಡ್‌ ಅಸೋಸಿಯೇಷನ್‌ ಅಧ್ಯಕ್ಷ ಸಾಧಿಕ್‌ ಪೈಲ್ವಾನ್‌ ಮಾತನಾಡಿ, ದಾವಣಗೆರೆಯಲ್ಲಿ ಎಲ್ಲ ಹಬ್ಬಗಳನ್ನು ಹಿಂದೂ-ಮುಸ್ಲಿಂ ಬಾಂಧವರು ಒಂದೇ ತಾಯಿಯ ಮಕ್ಕಳಂತೆ ಪರಸ್ಪರ ಅನ್ಯೋನತೆ ಆಚರಿಸುತ್ತಿದ್ದೇವೆ. ನಾವೆಲ್ಲರೂ ಒಂದಾಗಿ ಹಬ್ಬಗಳ ಆಚರಿಸುವ ಮೂಲಕ ಊರಿಗೆ, ಜಿಲ್ಲೆಗೆ ಒಳ್ಳೆಯದಾಗುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಹಿಂದೂ ಸಮಾಜದ ಮುಖಂಡ ಕೆ.ಬಿ. ಶಂಕರನಾರಾಯಣ ಮಾತನಾಡಿ, ಬಕ್ರೀದ್‌ ಒಳಗೊಂಡಂತೆ ಯಾವುದೇ ಹಬ್ಬವೇ ಆಗಿರಲಿ ಜಾತಿ, ಧರ್ಮಕ್ಕೆ ಸೀಮಿತವಾಗದೆ ಎಲ್ಲರೂ ಸೇರಿ ಅನ್ಯೋನತೆಯಿಂದ ಆಚರಿಸುವಂತಾಗಬೇಕು. ಆಗ ಎಲ್ಲ ಹಬ್ಬಗಳಿಗೆ ಮೆರಗು ಬರುತ್ತದೆ. ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ನೀರು, ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. 

ಮುಸ್ಲಿಂ ಸಮಾಜದ ಧರ್ಮಗುರು ಇಬ್ರಾಹಿಂ ಸಖಾಫಿ ಮಾತನಾಡಿ, ಆ. 22 ರಂದು ಬಕ್ರೀದ್‌ ಹಬ್ಬವನ್ನ ಸಂಭ್ರಮದಿಂದ ಆಚರಿಸುವಂತಹ ವಾತಾವರಣ ಇಲ್ಲ. ದೇವರ ನಾಡು ಎಂದೇ ಕರೆಯುಡುವ ಕೇರಳ, ದಕ್ಷಿಣ ಭಾರತದ ಕಾಶ್ಮೀರ ಖ್ಯಾತಿಯ ಕೊಡಗಿನಲ್ಲಿ ಮಳೆಯ ರುದ್ರನರ್ತನಕ್ಕೆ ಸಾವಿರಾರು ಜನರು ಮನೆ ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ನಮ್ಮ ಸಹೋದರರ ಸಂಕಷ್ಟ ಪರಿಹಾರಕ್ಕಾಗಿ ಬಕ್ರೀದ್‌ ಸಂದರ್ಭದಲ್ಲಿ ಪ್ರಾರ್ಥಿಸೋಣ ಎಂದು ಮನವಿ ಮಾಡಿದರು.

Advertisement

ತಂಜೀಮುಲ್‌ ಮುಸ್ಸ್ಲೀಂಮೀನ್‌ ಫಂಡ್‌  ಸೋಸಿಯೇಷನ್‌ನ ಜೆ. ಅಮಾನುಲ್ಲಾಖಾನ್‌ ಮಾತನಾಡಿ, ಯಾವುದೇ ಸಮಾಜದ ಹಬ್ಬಗಳೇ ಆಗಿರಲಿ ಸೌಹಾರ್ದತೆ, ಸಂತೋಷದ ಸಂಗಮವಾಗಿರಬೇಕು. ಭಯ ಮತ್ತು ಆತಂಕ ಇರಬಾರದು. ಎಲ್ಲರೂ ಶಾಂತಿ. ಸೌಹಾರ್ದತೆಯಿಂದ ಹಬ್ಬ ಆಚರಿಸೋಣ ಎಂದು ಮನವಿ ಮಾಡಿದರು. ಮಹಾನಗರ ಪಾಲಿಕೆ ಸದಸ್ಯ ಆವರಗೆರೆ ಎಚ್‌.ಜಿ. ಉಮೇಶ್‌ ಮಾತನಾಡಿ, ಕೇರಳ, ಕೊಡಗಿನಲ್ಲಿ ಜಲಪ್ರಳಯದ ಹಿನ್ನೆಲೆಯಲ್ಲಿ ಅನೇಕರು ಸಾವು-ನೋವಿನಲ್ಲಿದ್ದಾರೆ. ಹಾಗಾಗಿ ಬಕ್ರೀದ್‌ ಹಬ್ಬವನ್ನು ಅದ್ಧೂರಿಯ ಬದಲಿಗೆ ಸಾಂಕೇತಿಕ, ಸಮಾಧಾನಕ್ಕಾಗಿ ಆಚರಿಸುವಂತಾಗಬೇಕು. ಗಣೇಶ ಹಬ್ಬ ಒಳಗೊಂಡಂತೆ ಯಾವುದೇ ಹಬ್ಬದ ಸಂದರ್ಭದಲ್ಲಿ ಡಿಜೆ ಬಳಕೆ ನಿರ್ಬಂಧಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳ ಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಸದಸ್ಯ ಎಂ. ಹಾಲೇಶ್‌, ಹಿಂದೂ ಜಾಗರಣ ವೇದಿಕೆ ಸತೀಶ್‌ ಪೂಜಾರಿ, ಕೋಮು ಸೌಹಾರ್ದ ವೇದಿಕೆ ಅನೀಸ್‌ ಪಾಷಾ, ತಂಜೀಮುಲ್‌ ಮುಸ್ಲೀಂಮೀನ್‌ ಫಂಡ್‌ ಅಸೋಸಿಯೇಷನ್‌ನ ರಜ್ವಿಖಾನ್‌, ಜಿಲ್ಲಾ ಅಭಿವೃದ್ಧಿ ಸಮಿತಿಯ ಎಂ.ಜಿ. ಶ್ರೀಕಾಂತ್‌, ಜಿಲ್ಲಾ ವಕ್ಫ್ಮಂ ಡಳಿ ಅಧ್ಯಕ್ಷ ಮಹಮ್ಮದ್‌ ಶಿರಾಜ್‌ ಇತರರು ಮಾತನಾಡಿದರು.

ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಟಿ.ಜೆ. ಉದೇಶ್‌, ನಗರ ಪೊಲೀಸ್‌ ಉಪಾಧೀಕ್ಷಕ ಎಂ. ಬಾಬು ಇತರರು ಇದ್ದರು. ಐರಣಿ ಚಂದ್ರು ಜಾಗೃತಿ ಗೀತೆ ಹಾಡಿದರು. ವೃತ್ತ ನಿರೀಕ್ಷಕ ಇ. ಆನಂದ್‌ ಸ್ವಾಗತಿಸಿದರು. ಜಿ.ಬಿ. ಉಮೇಶ್‌ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next