ರಾಮದುರ್ಗ: ಗಣೇಶ ಉತ್ಸವ ಆಚರಣೆ ಸಂದರ್ಭದಲ್ಲಿ ಪ್ರತಿಷ್ಠಾಪನಾ ಕಮಿಟಿ ಪದಾಧಿಕಾರಿಗಳು ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಸುರಕ್ಷಿತವಾಗಿ ಹಬ್ಬ ಆಚರಣೆ ಮಾಡಲು ಸಹಕರಿಸಿದಲ್ಲಿ ಸಾರ್ವಜನಿಕ ಸ್ನೇಹಿಯಾಗಿ ಪೊಲೀಸ್ ಇಲಾಖೆ ಕೆಲಸ ಮಾಡಲಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಹೇಳಿದರು.
ಪಟ್ಟಣದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಗಣೇಶ ಉತ್ಸವ ಹಾಗೂ ಮೊಹರಂ ಪ್ರಯುಕ್ತ ಏರ್ಪಡಿಸಿದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೆರೆ ಹಾವಳಿಯಿಂದ ಸಂಕಷ್ಠದಲ್ಲಿರುವ ಎಲ್ಲರನ್ನು ಜೊತೆಗೆ ಕರೆದುಕೊಂಡು ಹಬ್ಬ ಆಚರಣೆ ಮಾಡಿ, ಪ್ರವಾಹ ಪೀಡಿತರಿಗೆ ಉತ್ಸವ ಕಮಿಟಿ ಸಹಾಯ ಮಾಡಲು ಮುಂದಾದಲ್ಲಿ ವಿಶೇಷವಾಗಿ ಹಬ್ಬ ಆಚರಿಸಿದಂತಾಗುತ್ತದೆ ಎಂದರು.
ಗಣೇಶ ಮಂಟಪ ಸ್ಥಾಪನೆ ಹಾಗೂ ವಿಸರ್ಜನೆಯ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕದ ಬಗೆಗೆ ಜಾಗೃತೆ ವಹಿಸಬೇಕು. ನಿಷ್ಕಾಳಜಿ ವಹಿಸಿ ಶಾರ್ಟ್ ಸರ್ಕ್ನೂಟ್ ಸಂಭವಿಸಿದಲ್ಲಿ ದೊಡ್ಡ ಅಪಾಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಹೆಸ್ಕಾಂ ಇಲಾಖೆಯ ಅಧಿಕೃತ ಪರವಾಣಿಗೆ ಪಡೆದು ವಿದ್ಯುತ್ ಸಂಪರ್ಕ ಪಡೆದುಕೊಂಡು ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಬೇಕು. 50-60 ಡೆಸಿಬಲ್ಗಿಂದ ಅಧಿಕವಿರುವ ಸೌಂಡ್ಸ್‌ಗಳ ಬಳಕೆಯಿಂದ ವಯೋವೃದ್ಧರು ಹಾಗೂ ಚಿಕ್ಕ ಮಕ್ಕಳಿಗೆ ಹೃದಯ ಸಂಬಂಧಿತ ತೊಂದರೆಗೆ ಕಾರಣವಾಗಲಿದೆ. ಎಲ್ಲ ಕೋಮಿನ ಜನತೆಗೆ ಒಟ್ಟಿಗೆ ಪಾಲ್ಗೊಂಡು ಸೌಹಾರ್ಧತೆಯಿಂದ ಮೊಹರಂ ಹಾಗೂ ಗಣೇಶ ಉತ್ಸವ ಆಚರಿಸಬೇಕು ಎಂದು ಹೇಳಿದರು.
ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಹಬ್ಬದ ಆಚರಣೆ ಸಂದರ್ಭದಲ್ಲಿ ಆಚರಣೆ ಹಿನ್ನಲೆ ಅರಿತು ಆಚರಿಸಬೇಕು. ನಾವು ಮಾಡುವ ಯಾವುದೇ ಆಚರಣೆಗಳಿಂದ ಸಮಾಜದಲ್ಲಿರುವ ಮತ್ತೂಬ್ಬರಿಗೆ ತೊಂದರೆಯಾಗದಂತೆ ನಿಘಾ ವಹಿಸಬೇಕು ಸಲಹೆ ನೀಡಿದರು.
ಈ ವೇಳೆ ಗ್ರೇಡ-2 ತಹಶೀಲ್ದಾರ್ ಎಸ್.ಕೆ. ತಂಗೊಳಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಮಿಲಾನಟ್ಟಿ, ಡಿವೈಎಸ್‌ಪಿ ಬಿ.ಎಸ್ ಪಾಟೀಲ, ಸಿಪಿಐ ಲಖನ್ ಮಸಗುಪ್ಪಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಸ್. ಕರ್ಕಿ ಸೇರಿದಂತೆ ಇತರರಿದ್ದರು. ಶಿಕ್ಷಕ ಗಣೇಶ ಗೋಕಾವಿ ನಿರೂಪಿಸಿ, ವಂದಿಸಿದರು.