Advertisement

ರಂಜಾನ್‌ ಶಾಂತಿ, ಸೌಹಾರ್ದಯುತವಾಗಿ ಆಚರಿಸಿ

12:25 PM Jun 03, 2019 | Suhan S |

ಮಾಸ್ತಿ: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್‌ ಅನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲು ಎಲ್ಲಾ ಧರ್ಮದವರು ಸಹಕರಿಸಬೇಕು ಎಂದು ಪಿಎಸ್‌ಐ ವಸಂತ್‌ ಹೇಳಿದರು.

Advertisement

ಗ್ರಾಮದ ಪೊಲೀಸ್‌ ಠಾಣೆಯಲ್ಲಿ ರಂಜಾನ್‌ ಪ್ರಯುಕ್ತ ಸರ್ವಧರ್ಮಗಳ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳುವ ಹೊಣೆ ನಮ್ಮದಾಗಿದೆ. ಹಿಂದಿನಂತೆ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸಿ, ಅಹಿತಕರ ಘಟನೆಗಳಿಗೆ ಅವಕಾಶ ಕೊಡಬೇಡಿ, ಒಂದು ವೇಳೆ ಗೊಂದಲ ಅಥವಾ ಯಾವುದೇ ರೀತಿಯ ಘಟನೆಗಳು ಕಂಡು ಬಂದಲ್ಲಿ ಪೊಲೀಸ್‌ ಇಲಾಖೆ ಗಮನಕ್ಕೆ ತಂದರೆ ಈ ಬಗ್ಗೆ ಎಚ್ಚರಿಕೆ ವಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಾಸ್ತಿ ಗ್ರಾಪಂ ಸದಸ್ಯ ಹಾಗೂ ಅಲ್ಪ ಸಂಖ್ಯಾತರ ಮುಖಂಡ ಎಂ.ಎಸ್‌.ಶೌಕತ್‌ಉಲ್ಲಾ ಬೇಗ್‌ ಮಾತನಾಡಿ, ಮಾಸ್ತಿ ಸೇರಿ ಗೊಲ್ಲಪೇಟೆ, ಕೆ.ಉಪ್ಪಾರಹಳ್ಳಿ, ಕೃಷ್ಣಾಪುರ, ನಾಗದೇನಹಳ್ಳಿ ಗ್ರಾಮಗಳ ಮುಸ್ಲಿಮರು ಮಾಸ್ತಿ ಗ್ರಾಮದ ಮಧ್ಯ ಭಾಗದಲ್ಲಿ ಜಮಾಯಿಸಿ, ನಂತರ ನಿಗದಿತ ವೇಳೆಯಲ್ಲಿ ದೇವರ ನಾಮ ಸ್ಮರಣೆ ಮಾಡಿ, ಮುಖ್ಯರಸ್ತೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಅಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮನೆಗಳಲ್ಲಿ ಹಬ್ಬ ಆಚರಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಈದ್ಗಾ ಮೈದಾನಕ್ಕೆ ತೆರಳುವ ವೇಳೆ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಅನುಕೂಲ ಕಲ್ಪಿಸಿ ಹಾಗೂ ರಂಜಾನ್‌ ಹಬ್ಬ ಮುಗಿಯುವವರಿಗೂ ಗ್ರಾಮದಲ್ಲಿ ರಾತ್ರಿ ವೇಳೆ ಹೆಚ್ಚಿನ ಗಸ್ತು ಪೊಲೀಸ್‌ ವ್ಯವಸ್ಥೆ ಕಲ್ಪಿಸಿ ಕೊಡಿ ಎಂದು ಮನವಿ ಮಾಡಿದರು.

ಉರೂಸ್‌ಗೆ ಅನುಮತಿ ನೀಡಬೇಡಿ: ಮಾಸ್ತಿ ಗ್ರಾಮದಲ್ಲಿ ತಮ್ಮದೇ ಸಮುದಾಯದ ಕೆಲವು ಕುಟುಂಬಗಳು ಇದ್ದು, ಬೇರೆ ಕಡೆಯಿಂದ ಉರೂಸ್‌ ಮಾಡುವವರನ್ನು ಕರೆಸಿ ಕಾರ್ಯಕ್ರಮ ಏರ್ಪಡಿಸುತ್ತಿರುವ ಬಗ್ಗೆ ಮಾಹಿತಿ ಕೇಳಿ ಬರುತ್ತಿದ್ದು, ಉರೂಸ್‌ ಹಮ್ಮಿಕೊಳ್ಳಲು ಪೊಲೀಸ್‌ ಇಲಾಖೆ ಅನುಮತಿಗಾಗಿ ಬಂದಲ್ಲಿ ಯಾವುದೇ ಕಾರಣಕ್ಕೂ ನೀಡಬಾರದು ಎಂದು ಶಾಂತಿ ಸಭೆಯಲ್ಲಿ ಮುಸ್ಲಿಂ ಸಮುದಾಯದವರು ಮನವಿ ಮಾಡಿದರು.

Advertisement

ಕ್ರಮಕೈಗೊಳ್ಳಿ: ಗೊಲ್ಲಪೇಟೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ರಾತ್ರಿ ವೇಳೆ ಡಮರು ಬಾರಿಸಿಕೊಂಡು ಹೆಚ್ಚಿನ ಶಬ್ದ ಮಾಡಿ ಸುತ್ತ ಮುತ್ತಲಿನ ಕುಟುಂಬಗಳಿಗೆ ತೊಂದರೆ ನೀಡುತ್ತಿದ್ದಾನೆ. ಅಲ್ಲದೆ, ವಾಮಾಚಾರಗಳನ್ನು ಮಾಡುತ್ತಿರುವ ಬಗ್ಗೆ ತಿಳಿದು ಬಂದಿದೆ. ಈ ಬಗ್ಗೆ ಗಮನ ಹರಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಎಸ್‌ಐಗೆ ಮನವಿ ಮಾಡಿದರು. ಜಿಪಂ ಸದಸ್ಯ ಎಚ್.ವಿ.ಶ್ರೀನಿವಾಸ್‌, ಎಪಿಎಂಸಿ ನಿರ್ದೇಶಕ ಸಬ್ದಾರ್‌ಬೇಗ್‌, ತಾಪಂ ಮಾಜಿ ಸದಸ್ಯರಾದ ಕೆಂಭೋಡಿ ನಾರಾಯಣಪ್ಪ, ಮುನಿಕೃಷ್ಣಪ್ಪ, ಗ್ರಾಪಂ ಉಪಾಧ್ಯಕ್ಷ ಎಚ್.ವಿ. ಸತೀಶ್‌, ಸದಸ್ಯರಾದ ಎಂ.ಎನ್‌.ಮೋಹನ್‌ರಾವ್‌, ಜೆಸಿಬಿ ನಾಗರಾಜ್‌, ಕಾಂಗ್ರೆಸ್‌ ಪಕ್ಷದ ಅಲ್ಪ ಸಂಖ್ಯಾತರ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಅಕ್ರಂಪಾಷ, ಟೆಂಟ್ವೆಂಕಟೇಶ್‌, ಎಸ್‌.ಖಲೀಲ್, ಷೇಕ್‌ ಇಮ್ರಾನ್‌, ಮುರುಗೇಶ್‌, ಅಯ್ಯಪ್ಪ, ಚಂದ್ರಪ್ಪ ದೊಡ್ಡಕಲ್ಲಹಳ್ಳಿ ವೆಂಕಟೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next