Advertisement

ಸೌಹಾರ್ದಕ್ಕೆ ಧಕ್ಕೆ ಬರದಂತೆ ಹಬ್ಬ ಆಚರಿಸಿ:ಗಣಪತಿ ಗುಡಾಜೆ

12:45 PM Aug 21, 2017 | |

ತಾಳಿಕೋಟೆ: ಹಬ್ಬ ಆಚರಣೆಗಳು ಸಾಮರಸ್ಯ ಬಿತ್ತುವಂತವುಗಳಾಗಿವೆ. ಈ ಹಬ್ಬಗಳ ಆಚರಣೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಬಾರದಂತೆ ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಸಾಗಬೇಕೆಂದು ಡಿಎಸ್‌ಪಿ ಗಣಪತಿ ಗುಡಾಜೆ ಹೇಳಿದರು. ಗಣೇಶೋತ್ಸವ ಹಾಗೂ ಬಕ್ರೀದ್‌ ಹಬ್ಬದ ನಿಮಿತ್ತ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಕರೆಯಲಾದ
ಶಾಂತಿಪಾಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಳಿಕೋಟೆ ಶಾಂತತೆಗೆ ಹೆಸರುವಾಸಿಯಾದ ಪಟ್ಟಣವಾಗಿದೆ. ಹಿಂದೂ-ಮುಸ್ಲಿಂ ಬಾಂಧವರು ಯಾವಾಗಲೂ ಹಬ್ಬ ಆಚರಣೆಗಳಲ್ಲಿ ಪರಸ್ಪರ ಬಾಂಧವ್ಯ ಬೆಸೆಯುವಂತೆ ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿ ಗಣೇಶ ಉತ್ಸವ ಮತ್ತು ಬಕ್ರೀದ್‌ ಹಬ್ಬವು ಒಮ್ಮೆಗೆ ಆಚರಣೆಗೆ ಬರುತ್ತಿದ್ದರಿಂದ ಸೌಹಾರ್ದತೆ ಹೆಚ್ಚಿಸುವಂತಹದ್ದಾಗಿದೆ. ಗಣೇಶ ಉತ್ಸವ ಪ್ರತಿಷ್ಠಾಪನೆ ಆ. 25ರಂದು ಪ್ರಾರಂಭಗೊಂಡು ಸೆ. 2ರವೆಗೆ ಜರುಗುತ್ತದೆ. 2ರಂದೇ ಬಕ್ರೀದ್‌ ಹಬ್ಬ ಆಚರಿಸಲಾಗುತ್ತದೆ. ಈ ಗಣೇಶ ಉತ್ಸವ ಮತ್ತು ಬಕ್ರೀದ್‌ ಹಬ್ಬದ ಆಚರಣೆ ಸಮಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಬರದ ರೀತಿಯಲ್ಲಿ ಭಾಂದವ್ಯ ಬೆಸೆಯುಂತೆ ಎಲ್ಲರೂ ನಡೆದುಕೊಳ್ಳಬೇಕು. ಗಣೇಶ ಉತ್ಸವದ ಸಮಯದಲ್ಲಿ ಉತ್ಸವದ ಯುವಕ ಮಂಡಳಿಯವರು ನಿರ್ದಿಷ್ಟ ಪಡಿಸಿದ ಜಾಗೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ರಸ್ತೆಯಲ್ಲಿ ಜನರಿಗೆ ತಿರುಗಾಡಲು ಮತ್ತು ವಾಹನಗಳಿಗೆ ಸಂಚರಿಸಲು ಅನುಕೂಲ ಕಲ್ಪಿಸಿಕೊಂಡುವಂತಹ ಕಾರ್ಯಗಳನ್ನು ಮಾಡಬೇಕು. ಬಾಲಗಂಗಾಧರ ತಿಲಕ ಅವರು ಬ್ರಿಟಿಷರ ವಿರುದ್ಧ ಹೋರಾಡುವ ಸಲುವಾಗಿ ಜನರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ಸಲುವಾಗಿ ಬೀದಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಎಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿದ್ದರು ಎಂದರು. ಸಿಪಿಐ ರವಿಕುಮಾರ ಕಪ್ಪತ್ತೆನವರ ಮಾತನಾಡಿ, ಗಣೇಶ ಉತ್ಸವದ ಯುವಕ ಮಂಡಳಿಯವರಿಗೆ ಕೆಲವೊಂದಿಷ್ಟು ನಿಬಂಧನೆಗಳನ್ನು ಪೊಲೀಸ್‌ ಇಲಾಖೆ ಸಿದ್ಧಪಡಿಸಿದೆ. ಆಯಾ ನಿಬಂಧನೆಗಳಿಗೆ ತಕ್ಕಂತೆ ಉತ್ಸವ ಮಂಡಳಿಯವರು ನಡೆದುಕೊಂಡು ಹೋಗಬೇಕು. ಗಣೇಶ ಉತ್ಸವ ವಿಸರ್ಜನೆ ಸಮಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಮತ್ತೂಂದು ಕೋಮಿನವರಿಗೆ ನೋವು ತರುವಂತಹ ಹಾಡುಗಳನ್ನು ಬಳಸಬಾರದು ಎಂದರು. ಪಿಒಪಿ ಗಣೇಶ ಮೂರ್ತಿಗಳು ನೀರನ್ನು ಕಲುಷಿತಗೊಳಿಸುವುದಷ್ಟೇ ಅಲ್ಲದೇ ಗಣೇಶ ಮೂರ್ತಿ ನೀರಿನಲ್ಲಿ ಮುಳುಗುವುದಿಲ್ಲ ಮತ್ತು ಕರುಗುವುದಿಲ್ಲ. ಆ ಸಮಯದಲ್ಲಿ ಕೆಲವು ಕುಚೇಷ್ಠಿಗಳು ಗಣೇಶ ಮೂರ್ತಿಗಳನ್ನು ಹೊರಗಡೆ ತೆಗೆದು ವಿಕೃತಿಗೊಳಿಸಿ ಅವಮಾನಿಸುವಂತಹ ಕಾರ್ಯ ನಡೆಯುತ್ತವೆ. ಇದನ್ನು ಉತ್ಸವ ಸಮಿತಿಯವರು ಅರ್ಥೈಸಿಕೊಂಡು ಶಾಂತತೆಯಿಂದ ಗಣೇಶ ಉತ್ಸವ ಆಚರಿಸಿ ಪಟ್ಟಣದಲ್ಲಿ ಶಾಂತಿ ಸಾಮರಸ್ಯ ಬಿತ್ತಲು  ದಾಗಬೇಕೆಂದರು. ಪುರಸಭೆ ಮುಖ್ಯಾಧಿಕಾರಿ ಎ.ಬಿ. ಕಲಾಲ್‌ ಮಾತನಾಡಿ, ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಈ ಹಿಂದಿನಿಂದಲೂ ಡೋಣಿ ನದಿ ತೀರದಲ್ಲಿ ಹೊಂಡ ನಿರ್ಮಿಸಿಕೊಡಲಾಗುತ್ತದೆ. ಈ ಬಾರಿ ಎರಡು ಹೊಂಡಗಳನ್ನು ನಿರ್ಮಿಸಿಕೊಡುವ ವ್ಯವಸ್ಥೆ ಮಾಡಲಾಗುವದು. ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಗಳನ್ನು ಬಾವಿಯಲ್ಲಿ ವಿಸರ್ಜಿಸಬಾರದು ಎಂದರು. ಪಿಎಸ್‌ಐ ಎಂ.ಬಿ. ಬಿರಾದಾರ, ವಿಠ್ಠಲಸಿಂಗ್‌ ಹಜೇರಿ, ಗೈಬೂಸಾ ಮಕಾಂದಾರ, ಘನಶಾಮ ಚವ್ಹಾಣ, ಮೆಹಬೂಬ ಚೋರಗಸ್ತಿ, ಪರಶುರಾಮ ತಂಗಡಗಿ, ಅಣ್ಣಾಜಿ ಜಗತಾಪ, ಶಮಶುದ್ದೀನ ನಾಲಬಂದ, ಸಿದ್ದನಗೌಡ ಪಾಟೀಲ, ಪ್ರಭುಗೌಡ
ಮದರಕಲ್ಲ, ಖಾಜಾಹುಸೇನ ಡೋಣಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next