Advertisement

ಸಿಇಸಿ, ಇಸಿ ನೇಮಕಕ್ಕೆ ಸುಪ್ರೀಂ ಐತಿಹಾಸಿಕ ತೀರ್ಪು

08:17 PM Mar 02, 2023 | Team Udayavani |

ನವದೆಹಲಿ: ದೇಶದ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಮತ್ತು ಚುನಾವಣಾ ಆಯುಕ್ತರ(ಇಸಿ) ನೇಮಕಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಗುರುವಾರ ಐತಿಹಾಸಿಕ ತೀರ್ಪು ನೀಡಿದೆ.

Advertisement

“ಚುನಾವಣೆಯ ಪಾವಿತ್ರ್ಯತೆ’ಯನ್ನು ಉಳಿಸಿಕೊಳ್ಳಬೇಕೆಂದರೆ ಇನ್ನು ಮುಂದೆ, ಪ್ರಧಾನಮಂತ್ರಿ, ಲೋಕಸಭೆ ಪ್ರತಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ಶಿಫಾರಸಿನ ಮೇರೆಗೇ ರಾಷ್ಟ್ರಪತಿಗಳು ದೇಶದ ಸಿಇಸಿ ಮತ್ತು ಇಸಿಗಳ ನೇಮಕ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಅಷ್ಟೇ ಅಲ್ಲ, ಒಂದು ವೇಳೆ ಲೋಕಸಭೆಯ ಪ್ರತಿಪಕ್ಷ ನಾಯಕ ಇಲ್ಲದಿದ್ದರೆ, ಲೋಕಸಭೆಯಲ್ಲಿನ ಅತಿದೊಡ್ಡ ಪ್ರತಿಪಕ್ಷದ ನಾಯಕನನ್ನು ಈ ಸಮಿತಿಯಲ್ಲಿ ಸೇರಿಸಬೇಕು ಎಂದೂ ತೀರ್ಪಿನಲ್ಲಿ ಹೇಳಿದೆ.

ನ್ಯಾ. ಕೆ.ಎಂ. ಜೋಸೆಫ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಇಂಥದ್ದೊಂದು ಸರ್ವಸಮ್ಮತ ತೀರ್ಪನ್ನು ನೀಡಿದ್ದು, “ಚುನಾವಣಾ ಪ್ರಕ್ರಿಯೆಯ ನಿರಂತರ ನಿಂದನೆಯು ಪ್ರಜಾಸತ್ತೆಗೆ ಸಮಾಧಿ ತೋಡಲಿದೆ. ಒಂದು ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಪಾವಿತ್ರ್ಯತೆಯನ್ನು ನಾವು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಅದು “ಅಪಾಯಕಾರಿ ದುಷ್ಪರಿಣಾಮ’ವನ್ನು ಎದುರಿಸುವ ಸಾಧ್ಯತೆಯಿರುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

ಪ್ರಸ್ತುತ ಇರುವ ನಿಯಮದಂತೆ, ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ ಸಂವಿಧಾನದ 324ನೇ ವಿಧಿಯ ಅನ್ವಯ ಸಿಇಸಿ ಹಾಗೂ ಇಸಿಗಳನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.

ಸಿಇಸಿ ಮತ್ತು ಇಸಿಗಳ ನೇಮಕಕ್ಕೆ ಕೊಲಿಜಿಯಂ ಮಾದರಿ ವ್ಯವಸ್ಥೆ ಜಾರಿ ಮಾಡುವಂತೆ ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳಿಗೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ಸಂವಿಧಾನ ಪೀಠ, 2022ರ ನವೆಂಬರ್‌ 24ರಂದು ತೀರ್ಪನ್ನು ಕಾಯ್ದಿರಿಸಿತ್ತು. ವಿಚಾರಣೆ ವೇಳೆ ಕೇಂದ್ರ ಸರ್ಕಾರವು “ಮಿಂಚಿನ ವೇಗ’ದಲ್ಲಿ ಮಾಜಿ ಅಧಿಕಾರಿ ಅರುಣ್‌ ಗೋಯಲ್‌ರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿದ್ದರ ಬಗ್ಗೆಯೂ ನ್ಯಾಯಪೀಠ ಪ್ರಶ್ನಿಸಿತ್ತು.

Advertisement

ಪರ-ವಿರೋಧ ಪ್ರತಿಕ್ರಿಯೆ
ಸುಪ್ರೀಂ ಕೋರ್ಟ್‌ ತೀರ್ಪನ್ನು ಕಾಂಗ್ರೆಸ್‌, ಟಿಎಂಸಿ, ಎಡಪಕ್ಷಗಳು, ಆಪ್‌ ಸೇರಿದಂತೆ ಎಲ್ಲ ಪ್ರತಿಪಕ್ಷಗಳೂ ಸ್ವಾಗತಿಸಿವೆ. ಈ ಐತಿಹಾಸಿಕ ತೀರ್ಪು ದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಗೆ ದಾರಿಮಾಡಿಕೊಡಲಿದೆ. ಇದು ಪ್ರಜಾಸತ್ತೆಗೆ ಸಂದ ಜಯ ಎಂದು ಪ್ರತಿಪಕ್ಷಗಳು ಹೇಳಿವೆ. ಇನ್ನು, ಈ ತೀರ್ಪಿಗೆ ಕೆಲವು ತಜ್ಞರು ಸಹಮತ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಚುನಾವಣಾ ಆಯೋಗವು ಇಂಥದ್ದೊಂದು ಬೇಡಿಕೆಯನ್ನು ಮುಂದಿಟ್ಟಿತ್ತು. ಹಲವು ಬಾರಿ ಸಿಇಸಿಗಳು ಕೂಡ ಈ ಬಗ್ಗೆ ಕೋರಿಕೆ ಸಲ್ಲಿಸಿ ಪತ್ರ ಬರೆದಿದ್ದರು ಎಂದು ನಿವೃತ್ತ ಸಿಇಸಿ ಎಸ್‌.ವೈ.ಖುರೇಷಿ ಹೇಳಿದ್ದಾರೆ. ಲೋಕಸಭೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ಅವರೂ ತೀರ್ಪನ್ನು ಸ್ವಾಗತಿಸಿದ್ದಾರೆ. ಇದೇ ವೇಳೆ, ತೀರ್ಪಿಗೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರದ ಮಾಜಿ ಕಾನೂನು ಕಾರ್ಯದರ್ಶಿ ಪಿ.ಕೆ.ಮಲ್ಹೋತ್ರಾ, “ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್‌ ಕಾರ್ಯಾಂಗದ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದೆ. ಇದನ್ನು ಮಾಡಬೇಕಾದದ್ದು ಸಂಸತ್ತೇ ಹೊರತು ಸುಪ್ರೀಂ ಕೋರ್ಟ್‌ ಅಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next