Advertisement

CEC, E.C. ಆಯ್ಕೆ ಸಮಿತಿಯಲ್ಲಿ CJI ಇಲ್ಲ- ರಾಜ್ಯಸಭೆಯಲ್ಲಿ ಹೊಸ ವಿಧೇಯಕ ಮಂಡನೆ

08:59 PM Aug 10, 2023 | Team Udayavani |

ನವದೆಹಲಿ: ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಮತ್ತೂಂದು ಹಂತದ ಸಮರ ತಂದುಕೊಡಲಿದೆ ಎಂದು ವಿಶ್ಲೇಷಿಸಲಾಗುತ್ತಿರುವ ಹೊಸ ವಿಧೇಯಕವನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಂಡಿಸಿದೆ.

Advertisement

ಭಾರತದ ಚುನಾವಣಾ ಆಯೋಗಕ್ಕೆ ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರನ್ನು ನೇಮಿಸುವ ಸಮಿತಿಯಲ್ಲಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಕೈಬಿಟ್ಟು ಆ ಸ್ಥಾನಕ್ಕೆ ಕೇಂದ್ರ ಸಚಿವರನ್ನು ನೇಮಿಸುವ “ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕ ಮತ್ತು ಅಧಿಕಾರದ ಅವಧಿಯಲ್ಲಿನ ಸೇವೆಗಳು) ವಿಧೇಯಕ 2023’ನ್ನು ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌ ಮಂಡಿಸಿದ್ದಾರೆ.

ವಿಧೇಯಕದ ಪ್ರಕಾರ ಮುಂದಿನ ದಿನಗಳಲ್ಲಿ ಸಿಇಸಿ, ಇ.ಸಿ.ಗಳ ಆಯ್ಕೆಗೆ ಮೂವರ ಸಮಿತಿಯಲ್ಲಿ ಪ್ರಧಾನಮಂತ್ರಿ ಮುಖ್ಯಸ್ಥರು. ಆ ಸಮಿತಿಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ, ಕೇಂದ್ರ ಸಂಪುಟದ ಸಚಿವರು ಇರಲಿದ್ದಾರೆ. ಸರ್ಕಾರದ ಈ ಕ್ರಮಕ್ಕೆ ಆಮ್‌ ಆದ್ಮಿ ಪಕ್ಷ, ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿವೆ.

ಸುಪ್ರೀಂನಿಂದ ತೀರ್ಪು:
ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ಭಾರತದ ಚುನಾವಣಾ ಆಯೋಗಕ್ಕೆ ಮುಖ್ಯ ಚುನಾವಣಾ ಆಯುಕ್ತರು, ಚುನಾವಣಾ ಆಯುಕ್ತರನ್ನು ನೇಮಿಸಬೇಕು ಎಂದು ತೀರ್ಪು ನೀಡಿತ್ತು. ಅದರಲ್ಲಿ ಪ್ರಧಾನಿ, ಲೋಕಸಭೆ ಪ್ರತಿಪಕ್ಷ ನಾಯಕ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಇರಬೇಕು ಎಂದು ಆದೇಶ ನೀಡಿತ್ತು. ಈ ಬಗ್ಗೆ ಸಂಸತ್‌ ಕಾನೂನು ರೂಪಿಸುವ ವರೆಗೆ ಈ ಆದೇಶ ಊರ್ಜಿತದಲ್ಲಿ ಇರಲಿದೆ ಎಂದು ತೀರ್ಪಿನಲ್ಲಿ ಉಲ್ಲೇಖೀಸಿತ್ತು. ಅದರಂತೆ ವಿಧೇಯಕ ರೂಪಿಸಿರುವ ಸರ್ಕಾರ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಬದಲಾಗಿ ಕೇಂದ್ರ ಸಚಿವರು ಇರುವಂತೆ ಬದಲಾವಣೆ ಮಾಡಿಕೊಂಡಿದೆ.

ಈ ಸಮಿತಿಯಲ್ಲಿ ಕೇಂದ್ರ ಸಂಪುಟ ಕಾರ್ಯದರ್ಶಿ, ಕೇಂದ್ರ ಸರ್ಕಾರದ ವತಿಯಿಂದ ಇನ್ನೂ ಇಬ್ಬರು ಕಾರ್ಯದರ್ಶಿಗಳು ಇರಲಿದ್ದಾರೆ. ಅದು ಹೆಸರುಗಳನ್ನು ಅಂತಿಮಗೊಳಿಸಲಿದೆ. ಮುಂದಿನ ವರ್ಷದ ಫೆ.14ರಂದು ಹಾಲಿ ಇ.ಸಿ. ಅನೂಪ್‌ ಚಂದ್ರಪಾಂಡೆ ನಿವೃತ್ತಿಯಾಗುವ ಸಂದರ್ಭದಲ್ಲಿ ಈ ಸಮಿತಿ ಪ್ರಧಾನ ಪಾತ್ರ ವಹಿಸಲಿದೆ. ಮುಂದಿನ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಮಾಡುವುದಕ್ಕೆ ಮೊದಲೇ ಈ ಬೆಳವಣಿಗೆ ನಡೆಯಲಿದೆ. ಸಮಿತಿ ಆಯ್ಕೆ ಮಾಡಿದ ಬಳಿಕ ರಾಷ್ಟ್ರಪತಿಗಳು ನೇಮಕ ಆದೇಶ ಹೊರಡಿಸುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next