Advertisement

ಸಿಡಿಸಿಸಿ ಬ್ಯಾಂಕ್‌ 4 ಸ್ಥಾನಕ್ಕೆ ಚುನಾವಣೆ

12:53 PM May 21, 2019 | Suhan S |

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಸಿಡಿಸಿಸಿ) ಆಡಳಿತ ಮಂಡಳಿಯ ನಾಲ್ಕು ನಿರ್ದೇಶಕರ ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಯಿತು.

Advertisement

ಅತ್ಯಂತ ಕುತೂಹಲ ಮೂಡಿಸಿದ್ದ ಹಿರಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಎ-ವರ್ಗದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡಿ. ಸುಧಾಕರ್‌ ಅವರ ರಾಜಕೀಯ ವಿರೋಧಿ, ಸಿಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಎನ್‌.ಆರ್‌. ಲಕ್ಷ್ಮೀಕಾಂತ್‌ 11 ಮತಗಳನ್ನು ಪಡೆದು 6 ಮತಗಳಿಂದ ಸೋಲು ಕಂಡಿದ್ದಾರೆ. ಇವರ ಪ್ರತಿಸ್ಪರ್ಧಿ ಪಿ. ರಾಜು 17 ಮತಗಳನ್ನು ಪಡೆದು ನಿರ್ದೇಶಕರಾಗಿ ಪುನರಾಯ್ಕೆಯಾಗಿದ್ದಾರೆ.

ಒಟ್ಟು 26 ಮಂದಿ ಸದಸ್ಯ ಮತದಾರರಿದ್ದು, ಆ ಪೈಕಿ 19 ಮತದಾರರು ಡಿ. ಸುಧಾಕರ್‌ ಪರ ಅಭ್ಯರ್ಥಿ ಪಿ. ರಾಜು ಪರವಾಗಿ ಕಳೆದ 27 ದಿನಗಳ ಹಿಂದೆ ಪ್ರವಾಸ ಕೈಗೊಂಡಿದ್ದರು. ಮತದಾನದ ದಿನದಂದು ಆ ಎಲ್ಲ 19 ಮಂದಿ ಮತದಾರರು ಆಗಮಿಸಿ ಮತ ಚಲಾಯಿಸಿದ್ದಾರೆ. ಪ್ರವಾಸ ತೆರಳಿದ್ದವರ ಪೈಕಿ ಇಬ್ಬರು ಲಕ್ಷ್ಮೀಕಾಂತ್‌ಗೆ ಮತ ಚಲಾಯಿಸಿದ್ದಾರೆ.

ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹಾಗೂ ಬಿಜೆಪಿ ಮುಖಂಡರು ಲಕ್ಷ್ಮೀಕಾಂತ್‌ ಗೆಲುವಿಗೆ ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ ಮಾಜಿ ಸಚಿವ ಸುಧಾಕರ್‌ ತಮ್ಮ ಆಪ್ತ ಸ್ನೇಹಿತ ಪಿ. ರಾಜು ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹರಿಯಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ. ಚಂದ್ರಕಾಂತ್‌ ನಾಮಪತ್ರ ಸಲ್ಲಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಕೊನೆಗೆ ಸುಧಾಕರ್‌ ಸಮ್ಮುಖದಲ್ಲಿ ತಲಾ ಎರಡೂವರೆ ವರ್ಷಕ್ಕೆ ನಿರ್ದೇಶಕ ಸ್ಥಾನ ಹಂಚಿಕೆಯ ಒಡಂಬಡಿಕೆ ಮಾಡಿಕೊಂಡಿದ್ದರಿಂದ ಚಂದ್ರಕಾಂತ್‌ ಸ್ಪರ್ಧೆಯಿಂದ ಹಿಂದೆ ಸರಿದು ಪಿ. ರಾಜು ಸ್ಪರ್ಧೆಗೆ ಅನುವು ಮಾಡಿಕೊಟ್ಟರು.

Advertisement

‘ಎ’ ವರ್ಗದ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಹೊಸದುರ್ಗ ತಾಲೂಕಿನಲ್ಲಿ 22 ಸದಸ್ಯರಿದ್ದಾರೆ. ಈ ಕ್ಷೇತ್ರದಿಂದ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪನವರ ಆಪ್ತರಾದ ಕೆ.ಎಸ್‌. ನಿಂಗಪ್ಪ ಹಾಗೂ ಮಾಜಿ ಸಚಿವ ಡಿ. ಸುಧಾಕರ್‌ ಆಪ್ತ ಎಚ್.ಬಿ. ಮಂಜುನಾಥ್‌ ಸ್ಪರ್ಸುವ ಮೂಲಕ ಸ್ವಪಕ್ಷೀಯರಲ್ಲೇ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಮಾಜಿ ಶಾಸಕ ಟಿ.ಎಚ್. ಬಸವರಾಜ್‌ ಪುತ್ರ ಎಚ್.ಬಿ.ಮಂಜುನಾಥ್‌ 13 ಮತಗಳನ್ನು ಪಡೆದು ಪುನರಾಯ್ಕೆಯಾದರೆ, ಪ್ರತಿಸ್ಪರ್ಧಿ ಕೆ.ಎಸ್‌. ನಿಂಗಪ್ಪ 9 ಮತಗಳಿಗೆ ತೃಪ್ತಿಪಡಬೇಕಾಯಿತು.

ಮೊಳಕಾಲ್ಮೂರು ತಾಲೂಕಿನಲ್ಲಿ 11 ಸದಸ್ಯರಿದ್ದು ಈ ಕ್ಷೇತ್ರದಿಂದ ಬಿಜೆಪಿಯ ಎಚ್.ಟಿ. ನಾಗಿರೆಡ್ಡಿ ಮತ್ತು ಕಾಂಗ್ರೆಸ್‌ ಪಕ್ಷದ ಬಿ. ಡಾ| ಬಿ. ಯೋಗೇಶ್‌ಬಾಬು ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ನಾಗಿರೆಡ್ಡಿ 8 ಮತಗಳನ್ನು ಪಡೆದು ಪುನರಾಯ್ಕೆಯಾದರೆ, ಅವರ ಎದುರಾಳಿ ಡಾ| ಬಿ. ಯೋಗೇಶ್‌ ಬಾಬು 3 ಮತಗಳನ್ನು ಪಡೆದು ಸೋಲು ಅನುಭವಿಸಿದರು.

ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರ ‘ಬಿ’ ವರ್ಗದಲ್ಲಿ 6 ಮತದಾರ ಸದಸ್ಯರಿದ್ದು, ಈ ವರ್ಗದಿಂದ ಎ. ಚನ್ನಬಸಪ್ಪ ಮತ್ತು ಸಿ. ವೀರಭದ್ರಬಾಬು ಕಣದಲ್ಲಿದ್ದರು. ವೀರಭದ್ರಬಾಬು 5 ಮತಗಳನ್ನು ಪಡೆದು ಆಯ್ಕೆಯಾದರೆ, ಎದುರಾಳಿ ಚನ್ನಬಸಪ್ಪ ಕೇವಲ ಒಂದು ಮತ ಪಡೆದು ಹೀನಾಯ ಸೋಲು ಕಂಡರು.

ಸಿಡಿಸಿಸಿ ಬ್ಯಾಂಕಿನ 12 ನಿರ್ದೇಶಕರ ಸ್ಥಾನಗಳಿಗೆ 8 ಅವಿರೋಧ ಆಯ್ಕೆ ಆಗಿದ್ದು, ಉಳಿದ ನಾಲ್ಕು ಸ್ಥಾನಗಳಿಗೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಶಾಂತಿಯುತ ಮತದಾನ ನಡೆಯಿತು. ಉಪ ವಿಭಾಗಾಧಿಕಾರಿ ವಿಜಯಕುಮಾರ್‌ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next