Advertisement

ಹೈಕೋರ್ಟ್‌ ಸಿಜೆಗೆ ಸಿ.ಡಿ. ಯುವತಿ ಇಮೇಲ್‌ ಪತ್ರ

11:46 PM Mar 29, 2021 | Team Udayavani |

ಬೆಂಗಳೂರು: ಸಿ.ಡಿ. ಪ್ರಕರಣದ ಯುವತಿಯು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು, ತಮ್ಮ ಮೇಲುಸ್ತುವಾರಿಯಲ್ಲಿಯೇ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾಳೆ. ಜತೆಗೆ ತಮ್ಮ ಕುಟುಂಬಕ್ಕೆ ಬೆದರಿಕೆಯಿದ್ದು, ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದಾಳೆ. ಈ ನಡುವೆ ಆಕೆಯನ್ನು ಕೋರ್ಟ್‌ಗೆ ಹಾಜರುಪಡಿಸಲು ಯುವತಿಯ ವಕೀಲರು ಮನವಿ ಮಾಡಿದ್ದು, ಅದನ್ನು ಕೋರ್ಟ್‌ ಪುರಸ್ಕರಿಸಿದೆ.

Advertisement

ಪತ್ರವನ್ನು ರವಿವಾರ ಇ-ಮೇಲ್ ಮೂಲಕ ಕಳುಹಿಸಿದ್ದು, “ನಾನು ಅತ್ಯಾಚಾರ ಸಂತ್ರಸ್ತೆ. ಈ ಸಂಬಂಧ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಐಟಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಪ್ರಮುಖ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ನನಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಅವರ ಬೆಂಬಲಿಗರಿಂದಲೂ ಬೆದರಿಕೆ ಇದೆ. ಅವರು ಪೋಷಕರ ಮೂಲಕ ನನ್ನನ್ನು ನಿಯಂತ್ರಿಸುತ್ತಿದ್ದಾರೆ. ಎಸ್‌ಐಟಿಯಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಇಲ್ಲ. ತನಿಖಾ ಸಂಸ್ಥೆ ಮೇಲೆ ಮಾಜಿ ಸಚಿವರು ಪ್ರಭಾವ ಬೀರಿದ್ದು, ಸಾಕ್ಷ್ಯ ನಾಶಪಡಿಸುತ್ತಿದ್ದಾರೆ. ಹೆತ್ತವರಿಂದ ಬಲವಂತವಾಗಿ ಹೇಳಿಕೆ ಕೊಡಿಸಲಾಗಿದೆ’ ಎಂದಿದ್ದಾಳೆ.

“ಎಸ್‌ಐಟಿಯು ಜಾರಕಿಹೊಳಿ ಮತ್ತು ಸರಕಾರ ಹೇಳಿದಂತೆ ಕೇಳುತ್ತಿದೆ. ಯಾವುದೇ ಸಂದರ್ಭದಲ್ಲೂ ರಮೇಶ್‌ ಜಾರಕಿಹೊಳಿ ನನ್ನನ್ನು ಕೊಲ್ಲಬಹುದು. ಕುಟುಂಬದವರ ಮೇಲೆ ಒತ್ತಡ ಹಾಕಿ ನನ್ನನ್ನು ಅಪಹರಣ ಮಾಡಲಾಗಿದೆ ಎಂದು ಹೇಳಿಕೆ ಕೊಡಿಸುತ್ತಿದ್ದಾರೆ’ ಎಂದು ತಿಳಿಸಿದ್ದಾಳೆ.

ಡಿವೈಎಸ್ಪಿಯಿಂದ ಬೆದರಿಕೆ
“ನಮ್ಮ ಪಾಲಕರಿಗೆ ಡಿವೈಎಸ್‌ಪಿ ಕಟ್ಟಿಮನಿ ಒತ್ತಡ ಹಾಕಿ ಜಾರಕಿಹೊಳಿ ಪರ ಹೇಳಿಕೆ ನೀಡುವಂತೆ ಬೆದರಿಕೆ ಹಾಕಿರುತ್ತಾರೆ’ ಎಂದೂ ಹೇಳಿದ್ದಾಳೆ.

ಕೋರ್ಟ್‌ಗೆ ಹಾಜರುಪಡಿಸಲು ಸಿದ್ಧತೆ
ಯುವತಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಎಲ್ಲ ಸಿದ್ಧತೆಗಳೂ ನಡೆದಿದ್ದು, ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ಡೆಪ್ಯೂಟಿ ರಿಜಿಸ್ಟ್ರಾರ್‌ ಅವರು ಸಿಆರ್ಪಿಸಿ 164 ಪ್ರಕಾರ ಆಕೆಯ ಹೇಳಿಕೆ ದಾಖಲಿಸಲು ಅನುಮತಿ ನೀಡಿದ್ದಾರೆ.

Advertisement

ಯುವತಿ ಪರ ವಕೀಲರಾದ ಕೆ.ಎನ್‌. ಜಗದೀಶ್‌ ಬೆಳಗ್ಗೆ ಡೆಪ್ಯೂಟಿ ರಿಜಿಸ್ಟ್ರಾರ್‌ ಅವರನ್ನು ಭೇಟಿಯಾಗಿ ಸಿಆರ್‌ ಪಿಸಿ 164 ಅಡಿ ಯುವತಿಗೆ ಹೇಳಿಕೆ ದಾಖಲಿಸಲು ಅನುಮತಿ ಕೋರಿದ್ದು, ಸಂಜೆ ವೇಳೆಗೆ ಅನುಮತಿ ಸಿಕ್ಕಿದೆ. ಭದ್ರತೆ ದೃಷ್ಟಿಯಿಂದ ಯುವತಿಯನ್ನು ನ್ಯಾಯಾಧೀಶರ ಮುಂದೆ ಹೇಗೆ? ಹಾಜರುಪಡಿಸಬೇಕೆಂದು ಇ-ಮೇಲ್‌ ಆಮೂಲಕ ಡೆಪ್ಯೂಟಿ ರಿಜಿಸ್ಟ್ರಾರ್‌ ಅವರು ತಿಳಿಸಲಿದ್ದಾರೆ. ಅದರಲ್ಲಿ ಯಾವ ದಿನ, ಸಮಯವನ್ನು ಅವರೇ ಉಲ್ಲೇಖೀಸಲಿದ್ದಾರೆ. ಬಳಿಕ 24ನೇ ಎಸಿಎಂಎಂನ ನ್ಯಾಯಾಧೀಶರ ಎದುರು ಹಾಜರುಪಡಿಸುವ ಸಾಧ್ಯತೆಯಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಕೀಲ ಜಗದೀಶ್‌, ಯುವತಿಯನ್ನು ಕೋರ್ಟ್‌ಗೆ ಹಾಜರು ಪಡಿಸಲು ಆದೇಶವಾಗಿದೆ. ಆದರೆ, ಎಲ್ಲಿ ? ಯಾವಾಗ ಹಾಜರುಪಡಿಸಬೇಕು ಎಂಬ ಮಾಹಿತಾಗಿ ಕಾಯುತ್ತಿದ್ದೇವೆ. ನ್ಯಾಯಾಧೀಶರ ಮನೆ ಮುಂದೆ ಹಾಜರುಪಡಿಸಬೇಕಾ? ಅಥವಾ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೇ ಎಂಬುದನ್ನು ಇ-ಮೇಲ್‌ ಮೂಲಕ ತಿಳಿಸುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next