Advertisement

SSLC Results ಕುಸಿತಕ್ಕೆ ಸಿಸಿಕೆಮರಾ ಕಾರಣವಲ್ಲ: ಕೆಪಿಎಂಟಿಸಿಸಿ ಅಭಿಪ್ರಾಯ

12:23 AM May 14, 2024 | Team Udayavani |

ಬೆಂಗಳೂರು: ಸಿಸಿ ಕೆಮರಾ ಮತ್ತು ವೆಬ್‌ಕಾಸ್ಟಿಂಗ್‌ ವ್ಯವಸ್ಥೆಯಿಂದ ಎಸೆಸೆಲ್ಸಿ ಫ‌ಲಿತಾಂಶದಲ್ಲಿ ಶೇ.30 ಕುಸಿತ ಕಂಡಿದೆ ಎಂಬ ಅಧಿಕಾರಿಗಳ ಹೇಳಿಕೆ ಸಂಪೂರ್ಣ ಸುಳ್ಳು. ಫ‌ಲಿತಾಂಶ ಕುಸಿಯಲು ಇಲಾಖಾ ಅಧಿಕಾರಿಗಳ ಬೇಜವಾಬ್ದಾ ರಿಯೇ ಕಾರಣ ಎಂದು ಕರ್ನಾಟಕ ಖಾಸಗಿ ಶಾಲಾಆಡಳಿತ ಮಂಡಳಿಗಳು, ಬೋಧಕ ಮತ್ತು ಬೋಧಕೇತರ ಸಿಬಂದಿ ಸಮನ್ವಯ ಸಮಿತಿ (ಕೆಪಿಎಂಟಿಸಿಸಿ) ದೂರಿದೆ.

Advertisement

ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಮ್ಸ್‌, ಕುಸ್ಮಾ, ಮಾಸ್‌, ಮಿಕ್ಸಾ, ಎಬಿಸಿ, ಸೆಕ್‌, ಕುಮ್ಸಾ, ಐಎಸ್‌ಎಫ್ಐ, ಟಿಯು ಮತ್ತಿತರ ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳಾದ ಡಿ.ಶಶಿಕುಮಾರ್‌, ಸತ್ಯಮೂರ್ತಿ, ಆನಂದ್‌ ಬಾಬು, ಶೇಖರ್‌, ನಟೇಶ್‌, ಸುಪ್ರೀತ್‌ ಮುಂತಾದವರು, ಐದನೇ ತರಗತಿವರೆಗಿನ ಪಠ್ಯ ಕಳೆದ 18 ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ. ಪಠ್ಯ ಅಪ್ರಸ್ತುತ ಆಗಿರುವ ಬಗ್ಗೆ ವರದಿಯಿದ್ದರೂ ಪರಿಷ್ಕರಣೆಗೆ ಕ್ರಮ ಕೈಗೊಂಡಿಲ್ಲ. 10 ವರ್ಷ ಪಾಠ ಓದಿ ಎಸೆಸೆಲ್ಸಿಯಲ್ಲಿ ಕನಿಷ್ಠ 25 ಅಂಕ ಪಡೆಯಲಾಗದ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿರುವುದು ಅತ್ಯಂತ ಬೇಸರದ ಸಂಗತಿ ಎಂದರು.

ಶಿಕ್ಷಣ ಸಚಿವರು ಕೈಗೇ ಸಿಗುತ್ತಿಲ್ಲ
ಶಿಕ್ಷಣ ಇಲಾಖೆಗೆ ಸಚಿವರು ಇದ್ದಾರೋ ಇಲ್ಲವೋ ಅರ್ಥವಾಗುತ್ತಿಲ್ಲ. ಅಧಿಕಾರ ವಹಿಸಿಕೊಂಡಾಗಿನಿಂದ ಅವರು ಕೈಗೇ ಸಿಗುತ್ತಿಲ್ಲ. ನಮ್ಮ ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ಅಧಿಕಾರಿಯೊಬ್ಬರ ಜತೆ ಮಾತನಾಡಿ ಎಂದಷ್ಟೆ ಹೇಳುತ್ತಾರೆ. ಸಚಿವರು ಇನ್ನಾದರೂ ಭಾಗೀದಾರರ ಕೈಗೆ ಸಿಗುವಂತಾಗಬೇಕು ಎಂದು ಶಶಿಕುಮಾರ್‌ ಆಗ್ರಹಿಸಿದರು.

ಸಿಇಟಿ ಪ್ರಶ್ನೆಪತ್ರಿಕೆ ತಯಾರಿಯಲ್ಲಿ ಆಂಧ್ರ ಲಾಬಿ
ರಾಜ್ಯದ ಬೋರ್ಡ್‌ ಪರೀಕ್ಷೆ ಮತ್ತು ಸಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಅಕ್ರಮ ನಡೆಯುತ್ತಿದೆ. ಪೇಪರ್‌ ಸಿದ್ಧಗೊಳಿಸುವವರು ಕೋಚಿಂಗ್‌, ಟ್ಯೂಷನ್‌ ಸೆಂಟರ್‌ಗೆ ಹೋಗಿ ಪಾಠ ಮಾಡುತ್ತಿದ್ದಾರೆ. ಈ ಬಾರಿ ಸಿಇಸಿಯಲ್ಲಿ 50ಕ್ಕಿಂತ ಹೆಚ್ಚು ಔಟ್‌ ಆಫ್ ಸಿಲಬಸ್‌ ಪ್ರಶ್ನೆ ಕೇಳಿದ್ದಾರೆ ಎಂದು ವಿವಾದವಾಗಿತ್ತು. ಈ ಔಟ್‌ ಆಫ್ ಸಿಲಬಸ್‌ ಪ್ರಶ್ನೆಗಳು ಆಂಧ್ರಪ್ರದೇಶದ ಸಿಲಬಸ್‌ನಲ್ಲಿದ್ದವು ಎಂದು ಶಶಿಕುಮಾರ್‌ ಮತ್ತು ಸುಪ್ರೀತ್‌ ಆರೋಪಿಸಿದರು.

ಸಿಎಂಗೆ ಮನವಿ ಸಲ್ಲಿಕೆ
ಬಳಿಕ ಮುಖ್ಯಮಂತ್ರಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಖಾಸಗಿ ಶಾಲೆಗಳ ಸಂಘಟನೆಯ ಪ್ರತಿನಿಧಿಗಳು, ರಾಜ್ಯದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಶೀಘ್ರವೇ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ ಎಂದು ಶಶಿಕುಮಾರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next