ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಡ್ರಗ್ಸ್ ದಂಧೆ ಪ್ರಕರಣಕ್ಕೆ ಇದೀಗ ಇನ್ನೊಂದು ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ.
ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರಿಗೆ ಸಿಸಿಬಿ ಪೊಲೀಸರು ನೋಟೀಸ್ ನೀಡಿದ್ದಾರೆ.
ಮತ್ತು ಗುರುವಾರ ಬೆಳಿಗ್ಗೆ ಸಿಸಿಬಿ ಕಛೇರಿಗೆ ಬಂದು ವಿಚಾರಣೆಯಲ್ಲಿ ಭಾಗಿಯಾಗಬೇಕು ಎಂದು ಈ ನೊಟೀಸ್ ನಲ್ಲಿ ನಟಿಗೆ ತಿಳಿಸಲಾಗಿದೆ.
‘ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯನ್ನು ವಿಚಾರಣೆ ನಡೆಸಲು ನೊಟೀಸು ನೀಡಲಾಗಿದ್ದು ಅವರು ಗುರುವಾರ ಕಛೇರಿಗೆ ಬಂದ ಬಳಿಕ ಅವರನ್ನು ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುವುದು’ ಎಂದು ಸಿಸಿಬಿಯ ಉನ್ನತ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಪೊಲೀಸರ ವಶದಲ್ಲಿರುವ ನಟಿ ರಾಗಿಣಿ ಅವರ ಆಪ್ತನೊಬ್ಬ ನಶೆ ವಿಚಾರದಲ್ಲಿ ನಟಿಗೆ ಲಿಂಕ್ ಇರುವ ವಿಚಾರವನ್ನು ಬಿಚ್ಚಿಟ್ಟಿರುವ ಸಾಧ್ಯತೆಗಳಿದ್ದು ಈ ಕಾರಣದಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ತರಾತುರಿಯಲ್ಲಿ ರಾಗಿಣಿ ಅವರನ್ನು ಸಿಸಿಬಿ ತನಿಖಾ ತಂಡ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿರುವ ಸಾಧ್ಯತೆಗಳ ಕುರಿತಾಗಿ ಇದೀಗ ಮಾತನಾಡಲಾಗುತ್ತಿದೆ.
ಮಾದಕ ದ್ರವ್ಯ ಪೂರೈಕೆಯ ಕಿಂಗ್ ಪಿನ್ ಅನಿಕಾಳನ್ನು ಬಂಧಿಸಿದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ನಶೆಯ ಹುಚ್ಚು ಹೆಚ್ಚಾಗಿರುವ ವಿಚಾರ ಒಂದೊಂದಾಗಿ ಬೆಳಕಿಗೆ ಬರತೊಡಗಿತ್ತು.
ಈ ನಡುವೆ ಪತ್ರಕರ್ತ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪಾರ್ಟಿಗಳು ನಡೆಯುವ ಕುರಿತಾಗಿ ತನಗೆ ಮಾಹಿತಿ ಇದೆ ಎಂದು ಹೇಳಿಕೆ ನೀಡಿದ್ದ ಕಾರಣ ಸಿಸಿಬಿ ಈಗಾಗಲೇ ಇಂದ್ರಜಿತ್ ಅವರನ್ನು ಒಂದು ಹಂತದ ವಿಚಾರಣೆಯನ್ನು ನಡೆಸಿ ಬಿಟ್ಟಿದೆ.