ಬೆಂಗಳೂರು: ಮಾದಕ ವಸ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ನಗರ ವಿಭಾಗದ ಸಿಸಿಬಿ ಪೊಲೀಸರು, ಅಂತಾರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳು ಸೇರಿ 14 ಮಂದಿಯನ್ನು ಬಂಧಿಸಿದ್ದು, 7.83 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಮೂವರು ವಿದೇಶಿ ಪ್ರಜೆಗಳು, ಒಡಿಶಾದ 4, ಕೇರಳದ 4, ಬೆಂಗಳೂರಿನ ಮೂವರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾ ಗಿದೆ. ರೋಬಿನ್ ಜೋನ್, ಅಕ್ಷಯ್, ರೋಹಿತ್ ಆದಿತ್ಯ, ವಿಶಾಲ್ ವೀರ್, ಸಾಯಿ ಚೈತನ್ಯ ಸೇರಿ 14 ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ವರ್ತೂರು, ಬನಶಂಕರಿ, ವಿದ್ಯಾರಣ್ಯಪುರ, ಕಾಟನ್‌ಪೇಟೆ, ಕಾಡುಗೋಡಿ ಠಾಣೆಯಲ್ಲಿ 7 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಾಹನ, ವಸ್ತುಗಳ ವಶ: ಬಂಧಿತರ ಆರೋಪಿಗಳಿಂದ 182 ಕೇಜಿ ತೂಕದ ಗಾಂಜಾ, 1450 ಕೇಜಿ ಆಶಿಷ್ ಆಯಿಲ…, 16.2 ಗ್ರಾಂ ಎಂಡಿಎನ್‌ಎ ಕ್ರಿಸ್ಟೆಲ್, 135 ಎಕ್ಸ್‌ಟಸಿ ಮಾತ್ರೆಗಳು, ವೈಟ್‌ಪೌಡರ್ 1 ಕೆ.ಜಿ., ಮಫಡ್ರಿನ್ ಕ್ರಿಸ್ಟೆಲ್ 870 ಗ್ರಾಂ, ಕೊಕೈನ್ 80 ಗ್ರಾಂ, ಎಂಡಿಎಂಎ ಎಕ್ಸ್‌ಟಸಿ ಪೌಡರ್ 230 ಗ್ರಾಂ ಹಾಗೂ 8 ಮೊಬೈಲ್‌ಗಳು, 2 ಕಾರು, 1 ಸ್ಕೂಟರ್, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊಬೈಲ್, ಸಿರಿಂಜ್ ಜಪ್ತಿ: ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ಮಂದಿಯನ್ನು ಬಂಧಿಸಿ 13 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರನ್ನು ಬಂಧಿಸಿ 1.20 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು, 2 ಮೊಬೈಲ್, 16 ಸಿರಿಂಜ್‌ಗಳು, ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧಿಸಿ 1.25 ಕೋಟಿ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟೈಲ್, 1 ಮೊಬೈಲ್, ಕಾಟನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಮೂವರನ್ನು ಬಂಧಿಸಿ 1.40 ಕೋಟಿ ರೂ.ಮೌಲ್ಯದ ಗಾಂಜಾ, ಕಾರು, ಮೊಬೈಲಲ್ ವಶಪಡಿಸಿಕೊಂಡಿದ್ದಾರೆ.
ಕಾಡುಗೋಡಿಯಲ್ಲಿ ಒಬ್ಟಾತನನ್ನು ಬಂಧಿಸಿ 3.85 ಕೋಟಿ ರೂ. ಮೌಲ್ಯದ ವಿವಿಧ ಮಾದಕ ವಸ್ತುಗಳು, ಕಾರು, ಸ್ಕೂಟರ್, 1 ಮೊಬೈಲ್, ತೂಕದ ಯಂತ್ರ, ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು. ಉಪ ಪೊಲೀಸ್ ಆಯುಕ್ತ (ಅಪರಾಧ-2) ಆರ್.ಶ್ರೀನಿವಾಸಗೌಡ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಡಿ.ಕುಮಾರ್ ನೇತೃತ್ವದಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ, ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿದ್ದಾರೆ.