Advertisement

CCB ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಮಾರಾಟ: ಇಬ್ಬರು ಡ್ರಗ್‌ ಪೆಡ್ಲರ್‌ಗಳ ಸೆರೆ

09:54 PM Aug 27, 2023 | Team Udayavani |

ಮಂಗಳೂರು: ನಗರಾದ್ಯಂತ ಹಲವು ಸಮಯದಿಂದ ಮಾದಕ ವಸ್ತು ಎಂಡಿಎಂಎ ಯನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಕುಖ್ಯಾತ ಡ್ರಗ್‌ ಪೆಡ್ಲರ್‌ ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿದ್ದಾರೆ.

Advertisement

ಸುರತ್ಕಲ್‌ ಕಾಟಿಪಳ್ಳ 2ನೇ ಬ್ಲಾಕ್‌ ನಿವಾಸಿ ಶಾಕೀಬ್‌ ಯಾನೇ ಶಬ್ಬು (33) ಮತ್ತು ಚೊಕ್ಕಬೆಟ್ಟು 8ನೇ ಬ್ಲಾಕ್‌ ನಿವಾಸಿ ನಿಸಾರ್‌ ಹುಸೈನ್‌ ಯಾನೇ ನಿಚ್ಚು (34) ಬಂಧಿತರು.

ಸುರತ್ಕಲ್‌ ತಡಂಬೈಲ್‌ ಪರಿಸರದ ಬೀಚ್‌ ರಸ್ತೆಯಲ್ಲಿ ಬಿಳಿ ಬಣ್ಣದ ಕಾರಿನಲ್ಲಿ ಇಬ್ಬರು ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ ಒಟ್ಟು 52 ಗ್ರಾಂ ತೂಕದ 2.60 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ವೋಕ್ಸ್‌ ವ್ಯಾಗನ್‌ ಕಾರು, 2 ಮೊಬೈಲ್‌ ಫೋನ್‌, 1,800 ರೂ.ನಗದು, ಡಿಜಿಟಲ್‌ ತೂಕ ಮಾಪನ ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 7,83,300 ರೂ. ಆರೋಪಿಗಳ ವಿರುದ್ಧ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸ್‌ ನಿರೀಕ್ಷಕ ಶ್ಯಾಮ್‌ ಸುಂದರ್‌ ಎಚ್‌.ಎಂ. ಪಿಎಸ್‌ಐಯವರಾದ ರಾಜೇಂದ್ರ ಬಿ., ಶರಣಪ್ಪ ಭಂಡಾರಿ, ಸುದೀಪ್‌ ಎಂ ವಿ., ನರೇಂದ್ರ ಹಾಗೂ ಸಿಸಿಬಿ ಸಿಬಂದಿ ಪಾಲ್ಗೊಂಡಿದ್ದರು.

ಶಾಕೀಬ್‌: 13 ಪ್ರಕರಣದಲ್ಲಿ ಆರೋಪಿ
ಶಾಕೀಬ್‌ ವಿರುದ್ಧ ಸುರತ್ಕಲ್‌ ಠಾಣೆಯಲ್ಲಿ ಮೂರು ಕಳವು ಪ್ರಕರಣ, ಕೊಲೆಯತ್ನ ಪ್ರಕರಣ, ಹಲ್ಲೆ ಪ್ರಕರಣ, ಬಜಪೆ ಠಾಣೆಯಲ್ಲಿ ದರೋಡೆ ಪ್ರಕರಣ, ಮಂಗಳೂರು ಉತ್ತರ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ, ಬರ್ಕೆ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಮೂಡುಬಿದಿರೆ ಠಾಣೆಯಲ್ಲಿ ಸರಕಳ್ಳತನ ಪ್ರಕರಣ, ಉಡುಪಿ ಜಿಲ್ಲೆಯ ಕಾರ್ಕಳ ನಗರ ಠಾಣೆ, ಕಾರ್ಕಳ ಗ್ರಾಮಾಂತರ ಠಾಣೆ, ಶಿರ್ವ ಠಾಣೆಗಳಲ್ಲಿ ಸರಕಳ್ಳತನ ಪ್ರಕರಣ, ಮಣಿಪಾಲದಲ್ಲಿ ದರೋಡೆ ಪ್ರಕರಣಗಳು ಹೀಗೆ ಒಟ್ಟು 13 ಪ್ರಕರಣಗಳು ದಾಖಲಾಗಿವೆ.

ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ಅನಂತರ ಪ್ರಕರಣದ ವಿಚಾರಣೆ ಸಮಯ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯವು ವಾರೆಂಟ್‌ ಹೊರಡಿಸಿತ್ತು.

ನಿಸಾರ್‌: 9 ಪ್ರಕರಣದಲ್ಲಿ ಆರೋಪಿ
ನಿಸಾರ್‌ ಹುಸೈನ್‌ ವಿರುದ್ಧ ಸುರತ್ಕಲ್‌ ಠಾಣೆಯಲ್ಲಿ ದರೋಡೆ ಪ್ರಕರಣ, ಕೊಲೆ ಯತ್ನ ಪ್ರಕರಣ, ಬರ್ಕೆ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ಹಾಗೂ ಕೊಲೆ ಯತ್ನ ಪ್ರಕರಣ, ಮೂಲ್ಕಿ ಠಾಣೆಯಲ್ಲಿ ಕಳವು ಪ್ರಕರಣ, ಮಂಗಳೂರು ಪೂರ್ವ ಠಾಣೆ, ಉಪ್ಪಿನಂಗಡಿ, ಸಕಲೇಶಪುರ ಠಾಣಾ ವ್ಯಾಪ್ತಿಯಲ್ಲಿನ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ನಡೆಸಿದ 3 ಪ್ರಕರಣಗಳು, ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ಹೀಗೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ 7 ವಾರಂಟ್‌ ಜಾರಿಯಲ್ಲಿದೆೆ. ಅಲ್ಲದೇ ಇತ್ತೀಚೆಗೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಕ್ರಿಕೆಟ್‌ ಪಂದ್ಯಾಟದ ವೇಳೆ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಕೂಡಾ ಭಾಗಿಯಾಗಿದ್ದು, ಈ ಪ್ರಕರಣದಲ್ಲಿ ಕೂಡ ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next