Advertisement

CCB Police: ಕುಕ್ಕರ್‌ನಲ್ಲಿ ಮಾದಕ ವಸ್ತು ಸಿದ್ಧಪಡಿಸಿ ಮಾರಾಟ 

11:04 AM Nov 11, 2023 | Team Udayavani |

ಬೆಂಗಳೂರು: ಅಡುಗೆ ಮಾಡುವ ಪ್ರಷರ್‌ ಕುಕ್ಕರ್‌ನಲ್ಲಿ ಸಿಂಥೆಟಿಕ್‌ ಮಾದಕ ವಸ್ತುಗಳನ್ನು ತಯಾರು ಮಾಡಿದೇಶ- ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನಿಂದ 10 ಕೋಟಿ ರೂ. ಮೌಲ್ಯದ ಮಾದಕ ವಸ್ತು  ಗಳನ್ನು ವಶಕ್ಕೆ ಪಡೆಯಲಾಗಿದೆ. ನೈಜಿರಿಯಾ ಮೂಲದ ಬೆಂಜಮೆನ್‌ ಅಲಿ ಯಾಸ್‌ ಚಿಡುಬೆಮು(40) ಬಂಧಿತ

Advertisement

ವಿದೇಶಿ ಪ್ರಜೆ. ಆರೋಪಿ ದೆಹಲಿ, ಮುಂಬೈನಿಂದ ಕಚ್ಚಾ ಪದಾರ್ಥಗಳನ್ನು ತರಿಸುತ್ತಿದ್ದ. ಬಳಿಕ ಅಡುಗೆ ಮಾಡುವ ಪ್ರಷರ್‌ ಕುಕ್ಕರ್‌ನಲ್ಲಿ ಮಾದಕ ವಸ್ತುಗಳನ್ನು ಸಿದ್ಧಪಡಿಸಿ ದೇಶ- ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ.

ಈತನಿಂದ 10 ಕೋಟಿ ರೂ. ಮೌಲ್ಯದ 5 ಕೆ.ಜಿ. ಎಂಡಿಎಂಎ, ಎಂಡಿಎಂಎ ತಯಾರು ಮಾಡಲು ಬೇಕಾದ ಕಚ್ಚಾ ಪದಾರ್ಥಗಳಾದ 12 ಕೆ.ಜಿ. 450 ಗ್ರಾಂ ಎಂಎಸ್‌ಎಂ, 5 ಕೆ.ಜಿ. ಸೋಡಿಯಂ ಹೈಡ್ರಾಕ್ಸೈಡ್‌ ಕ್ರಿಸ್ಟಲ್‌, 5 ಲೀಟರ್‌ ಹೈಡ್ರೋ ಕ್ಲೋರಿಕ್‌ ಆಸಿಡ್‌, 2.5 ಲೀಟರ್‌ ಅಸಿಟೋನ್‌, 5 ಲೀಟರ್‌ ಕುಕ್ಕರ್‌, ಗ್ಯಾಸ್‌ ಸ್ಟವ್‌, ಸಿಲಿಂಡರ್‌, 2 ಮೊಬೈಲ್‌ಗ‌ಳು, 2 ತೂಕದ ಯಂತ್ರಗಳು ಹಾಗೂ ಒಂದು ಬೈಕ್‌ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್‌ ಆಯಕ್ತ ಬಿ.ದಯಾನಂದ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2021ರಲ್ಲಿ ವ್ಯವಹಾರಿಕ ವೀಸಾ ಪಡೆದು ಬೆಂಗಳೂರಿಗೆ ಬಂದಿರುವ ನೈಜಿರಿಯಾ ಮೂಲದ ಆರೋಪಿಯ ವೀಸಾ ಅವಧಿ 2022ರಲ್ಲೇ ಮುಕ್ತಾಯಗೊಂಡಿದೆ. ಆದರೂ, ಆರೋಪಿ ಅಕ್ರಮವಾಗಿ ವಾಸವಾಗಿದ್ದಾನೆ. ಬಟ್ಟೆ ವ್ಯಾಪಾರ ಮಾಡುವುದಾಗಿ ಹೇಳಿ ಆವಲಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದ. ಆದರೆ, ಮುಂಬೈ, ದೆಹಲಿ ಮೂಲದ ಸ್ನೇಹಿತರ ಜತೆ ಸೇರಿ ಅಂತಾ ರಾಜ್ಯ ಮತ್ತು ಅಂತಾರಾಷ್ಟ್ರೀಯ ಡ್ರಗ್ಸ್‌ ದಂಧೆ ನಡೆಸುತ್ತಿದ್ದ ಎಂಬುದು ತನಿಖೆ ಯಿಂದ ಬೆಳಕಿಗೆ ಬಂದಿದೆ ಎಂದು ವಿವರಿಸಿದರು.

ಮನೆಯಲ್ಲೇ ಡ್ರಗ್ಸ್‌ ತಯಾರು!: ಇತ್ತೀಚೆಗೆ ಆರೋಪಿಯನ್ನು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ಈತನ ವಿಚಾರಣೆಯಲ್ಲಿ ಮನೆಯಲ್ಲೇ ಡ್ರಗ್ಸ್‌ ತಯಾರು ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಮುಂಬೈ, ದೆಹಲಿಯಲ್ಲಿರುವ ಸ್ನೇಹಿತರು ಹಾಗೂ ವಿದೇಶಿ ಪ್ರಜೆಗಳಿಂದ ಕಚ್ಚಾ ವಸ್ತುಗಳನ್ನು ಕೋರಿಯರ್‌ಗಳ ಮೂಲಕ ತರಿಸಿಕೊಳ್ಳುತ್ತಿದ್ದ. ಬಳಿಕ ಅವುಗಳನ್ನು ಯುಟ್ಯೂಬ್‌, ಆನ್‌ಲೈನ್‌ ಮೂಲಕ ಮಾಹಿತಿ ಪಡೆದು ಅಡುಗೆ ಮಾಡುವ ಕುಕ್ಕರ್‌ನಿಂದ ತಯಾರು ಮಾಡಿ, ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋರಿಯರ್‌ ಮೂಲಕವೇ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

ಸಿಸಿಬಿ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next