ಉಳ್ಳಾಲ: “ಡ್ರಗ್ಸ್ ಫ್ರಿ ಮಂಗಳೂರು’ ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಮಾದಕ ವಸ್ತುವಾದ ಎಂಡಿಎಂಎ (ಸಿಂಥೆಟಿಕ್ ಡ್ರಗ್ಸ್)ನ್ನು ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್‌ಗಳನ್ನು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ತಲಪಾಡಿ-ದೇವಿಪುರ ರಸ್ತೆಯಲ್ಲಿನ ತಚ್ಚಾಣಿ ಪರಿಸರದಲ್ಲಿ ಬಂಧಿಸಲಾಗಿದೆ.
ಬಂಧಿತ ಮೂವರು ಸಜೀಪ ಮುನ್ನೂರು ಗ್ರಾಮದವರಾಗಿದ್ದು, ನಂದಾವರ ಬಸ್ತಿಗುಡ್ಡೆ ಹೌಸ್ ನಿವಾಸಿ, ಪ್ರಸ್ತುತ ಉಳ್ಳಾಲ ಹಳೆಕೋಟೆಯಲ್ಲಿ ವಾಸವಾಗಿದ್ದ ಮೊಹಮ್ಮದ್ ಹಫೀಝ್ ಯಾನೆ ಅಪ್ಪಿ(35), ನಂದಾವರ ನಿವಾಸಿ ಅಮೀರ್ ಯಾನೆ ಅಮ್ಮಿ(34), ದಾಸರಗುಡ್ಡೆ ಪ್ರಸ್ತುತ ಹಳೆಯಂಗಡಿ ಸಂತೆ ಕಟ್ಟೆ ಮಸೀದಿ ಬಳಿ ನಿವಾಸಿ ಜಾಕೀರ್ ಹುಸೇನ್ ಯಾನೆ ತಾಚಿ(28) ಆರೋಪಿಗಳು.
ಆರೋಪಿಗಳಿಂದ ಒಟ್ಟು 200 ಗ್ರಾಂ ತೂಕದ 10,00,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮಾರುತಿ ಸ್ವಿಫ್ಟ್ ಕಾರು-1, 70,000 ರೂ. ಮೌಲ್ಯದ 3 ಮೊಬೈಲ್ ಫೋನ್‌ಗಳು, , ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 15,70,500 ರೂ. ಅಂದಾಜಿಸಲಾಗಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಾದಕ ವಸ್ತು ಮಾರಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.
ಬೆಂಗಳೂರಿನಿಂದ ಎಂಡಿಎಂಎ ಖರೀದಿಸಿ ಮಾರಾಟ ಮಾಡಲು ಸಾಗಿಸುತ್ತಿರುವ ಖಚಿತ ಮಾಹಿತಿಯಂತೆ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಶ್ಯಾಮ್‌ಸುಂದರ್ ಎಚ್.ಎಂ., ಪಿಎಸ್‌ಐಯವರಾದ ರಾಜೇಂದ್ರ ಬಿ., ಸುದೀಪ್ ಎಂ.ವಿ., ಶರಣಪ್ಪ ಭಂಡಾರಿ, ನರೇಂದ್ರ ಹಾಗೂ ಸಿಸಿಬಿ ಸಿಬಂದಿಗಳ ತಂಡ ದಾಳಿ ನಡೆಸಿದೆ.
ಆರೋಪಿಗಳ ಪೈಕಿ ಮೊಹಮ್ಮದ್ ಹಫೀಸ್ ಯಾನೆ ತಾಚಿ ಎಂಬಾತನ ವಿರುದ್ಧ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ ಹಾಗೂ ಇತರ 3 ದರೋಡೆ ಪ್ರಕರಣಗಳು, ಬಜಪೆ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ, ಮಂಗಳೂರು ದಕ್ಷಿಣ ಠಾಣೆಯಲ್ಲಿ 2 ಬೈಕ್ ಕಳವು ಪ್ರಕರಣಗಳು, ಉಡುಪಿ ಜಿಲ್ಲೆಯ ಶಿರ್ವ ಹಾಗೂ ಪಡುಬಿದ್ರಿ ಠಾಣೆಯಲ್ಲಿ ಕಳವು ಪ್ರಕರಣ ಹೀಗೆ ಒಟ್ಟು 8 ಪ್ರಕರಣಗಳಿವೆ.ಈತನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ನ್ಯಾಯಾಲಯವು ವಾರಂಟ್ ಜಾರಿಗೊಳಿಸಿದೆ.
ಇನ್ನೋರ್ವ ಆರೋಪಿ ಮೊಹಮ್ಮದ್ ಹಫೀಸ್ ಎಂಬಾತನ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಮಂಗಳೂರು ಪೂರ್ವ ಠಾಣೆಯಲ್ಲಿ ಹಲ್ಲೆ, ಬೆದರಿಕೆ ಪ್ರಕರಣ, ಬಂಟ್ವಾಳ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.