ಮಂಗಳೂರು: ಡ್ರಗ್ಸ್ ಫ್ರಿ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ಉತ್ತರ ಪೊಲೀಸ್ ಠಾಣೆ ಹಾಗೂ ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆ ಯಲ್ಲಿ ನಗರದಾದ್ಯಂತ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ 4 ಆರೋಪಿಗಳನ್ನು ದಸ್ತಗಿರಿ ಮಾಡಿ ಒಟ್ಟು 200 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣ-1: ಬೆಂಗಳೂರಿನಿಂದ ಎಂಡಿಎಂಎ ಮಾದಕ ವಸ್ತುವನ್ನು ಖರೀದಿಸಿಕೊಂಡು ಮಂಗಳೂರು ನಗರದ ಉತ್ತರ ಠಾಣಾ ವ್ಯಾಪ್ತಿಯ ಫಳ್ನೀರ್ ಪರಿಸರದಲ್ಲಿ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಮೂವರು ವ್ಯಕ್ತಿಗಳು ಸೇರಿಕೊಂಡು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಎಂಡಿಎಂಎ ಹೊಂದಿದ್ದ ಮಂಜೇಶ್ವರದ ಉದ್ಯಾವರ ನಿವಾಸಿಗಳಾದ ಮೊಹಮ್ಮದ್ ಹನೀಫ್ ಎ.ಎನ್.(47), ಸೈಯದ್ ಫೌಜಾನ್(30), ಮಂಜೇಶ್ವರದ ಕುಂಜತ್ತೂರಿನ ಸಿರಾಜುದ್ದೀನ್ ಅಬ್ಬೂಬಕ್ಕರ್ (35)ನನ್ನು ಸೆರೆ ಹಿಡಿದು, 5 ಲಕ್ಷ ರೂ. ಮೌಲ್ಯದ 100 ಗ್ರಾಂ ತೂಕದ ಎಂಡಿಎಂಎ, 4 ಸಾವಿರ ರೂ. ನಗದು, ಒಂದು ಮಾರುತಿ ಸ್ವಿಫ್ಟ್ ಕಾರು, ಮೂರು ಮೊಬೈಲ್, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿ ಕೊಳ್ಳಲಾಗಿದೆ. ಒಟ್ಟು ಮೌಲ್ಯ 10.94 ಲಕ್ಷ ರೂ. ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ-2: ಮಂಗಳೂರು ನಗರದ ಅಳಪೆ ಗ್ರಾಮದ ಕಂಕನಾಡಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಎಂಡಿಎಂಎ ಮಾದಕ ವಸ್ತು ಮಾಟಾದ ಮಾಡುತ್ತಿದ್ದ ಮಂಜೇಶ್ವರ ಮಿಯಾಪದವು ನಿವಾಸಿ ಇಬ್ರಾಹಿಂ ಅರ್ಷಾದ್ ವಿ.ಕೆ.(30)ನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನಿಂದ 5 ಲಕ್ಷ ರೂ ಮೌಲ್ಯದ 100 ಗ್ರಾಂ ಎಂಡಿಎಂಎ ಮಾದಕ ವಸ್ತು, ಒಂದು ಸಾವಿರ ರೂ. ನಗದು, ಒಂದು ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನ ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 5.11 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.
ಆರೋಪಿ ಇಬ್ರಾಹಿಂ ಅರ್ಷಾದ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಪಟ್ಟಂತೆ, ಮಂಜೇಶ್ವರ ಠಾಣೆಯಲ್ಲಿ 2 ಹಲ್ಲೆ ಪ್ರಕರಣ ಹಾಗೂ ಕುಂಬಳೆ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖ ಲಾಗಿರುತ್ತದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಚ್.ಎಂ., ಪಿಎಸ್‌ಐ ನರೇಂದ್ರ, ಶರಣಪ್ಪ ಭಂಡಾರಿ, ಸುದೀಪ್ ಎಂ.ವಿ., ಎಎಸ್‌ಐ ಮೋಹನ್ ಕೆ.ವಿ. ಹಾಗೂ ಸಿಸಿಬಿ ಸಿಬಂದಿ ಪಾಲ್ಗೊಂಡಿದ್ದರು.