ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ನಟಿಯರ ಜಾಲ ಬೆನ್ನತ್ತಿರುವ ಸಿಸಿಬಿ ಪೊಲೀಸರು ತನಿಖೆಯಲ್ಲಿ ಮತ್ತಷ್ಟು ಆಳಕ್ಕೆ ಇಳಿದಿದ್ದಾರೆ. ಕನ್ನಡದ ಖ್ಯಾತ ಕಲಾವಿದ ದಂಪತಿಯಾದ ದಿಗಂತ್ ಮತ್ತು ಐಂದ್ರಿತಾ ರೇ ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
ದಿಗಂತ್ ಮತ್ತು ಐಂದ್ರಿತಾ ರೇ ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು, ಬುಧವಾರ ಬೆಳಿಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗಲು ಸೂಚಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶೇಕ್ ಫಾಝಿಲ್ ನ ಶ್ರೀಲಂಕಾದ ಕ್ಯಾಸಿನೋಗೆ ಐಂದ್ರಿತಾ ಹೋಗಿದ್ದರು ಎನ್ನಲಾಗಿದೆ. ಅದಲ್ಲದೆ ಕ್ಯಾಸಿನೋಗೆ ‘ನೀವು ಬನ್ನಿ ನಾನು ಬರ್ತೇನೆ’ ಎಂದು ಆಹ್ವಾನಿಸುವ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ಅಭಿಷೇಕ್ ನೇಣು ಹಾಕಿಕೊಂಡಿದ್ದರೆ ಹೀಗೆ ಹೇಳ್ತೀರಾ? ಜಯಾ ಬಚ್ಚನ್ ಗೆ ಕಂಗನಾ ತಿರುಗೇಟು
ಡ್ರಗ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಮತ್ತು ಸಂಜನಾ ಈಗಾಗಲೇ ಬಂಧಿಯಾಗಿದ್ದು, ರಾಗಿಣಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ. ಸಂಜನಾ ಗಲ್ರಾಣಿ ಅವರನ್ನು ಮೂರು ದಿನಗಳ ಕಾಲ ಸಿಸಿಬಿ ಪೊಲೀಸರು ತಮ್ಮ ಕಸ್ಟಡಿ ಪಡೆದಿದ್ದಾರೆ.
ಸದ್ಯ ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇಗೆ ಸಿಸಿಬಿ ನೋಟಿಸ್ ನೀಡಿರುವುದು ಚಿತ್ರರಂಗದ ಮತ್ತಷ್ಟು ಮಂದಿ ಈ ಜಾಲದಲ್ಲಿ ಇದ್ದಾರೆ ಎಂಬ ಮಾತುಗಳಿಗೆ ಪುಷ್ಟಿ ನೀಡಿದಂತಾಗಿದೆ.
ಇದನ್ನೂ ಓದಿ: ಶೇಖ್ ಫಾಝಿಲ್ ಯಾರೆಂದು ನನಗೆ ಗೊತ್ತಿಲ, ಸಾಕ್ಷಿ ಇದ್ದರೆ ಕ್ರಮ ಕೈಗೊಳ್ಳಲಿ : ಸಿದ್ದು
ಇದೇ ಪ್ರಕರಣದ ಎ-6 ಆಗಿರುವ ಆದಿತ್ಯ ಆಳ್ವ ರೆಸಾರ್ಟ್ ಗೆ ಇಂದು ಬೆಳಿಗ್ಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದರು. ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರನಾಗಿರುವ ಆದಿತ್ಯ ಸದ್ಯ ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ.