ಬೆಂಗಳೂರು: ಸಿಸಿಬಿ ಇನ್‌ಸ್ಪೆಕ್ಟರ್ ಸೋಗಿನಲ್ಲಿ ಸಾಮಾಜಿಕ ಕಾರ್ಯಕರ್ತೆಯನ್ನು ಪರಿಚಯಿಸಿಕೊಂಡು ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಆಕೆಯಿಂದ ಚಿನ್ನಾಭರಣ, ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ನಿವಾಸಿ ಜಯರಾಮು (45) ಬಂಧಿತ. ಆರೋಪಿಯ ವಿರುದ್ಧ ತುಮಕೂರು ಮೂಲದ ಮಹಿಳೆ ದೂರು ನೀಡಿದ್ದರು.
ಆರೋಪಿ ಜಯರಾಮು ಪತ್ನಿಯಿಂದ ವಿಚ್ಛೇದನ ಪಡೆದು, ಒಂಟಿಯಾಗಿ ವಾಸಿಸುತ್ತಿದ್ದ. ಕೌಟುಂಬಿಕ ಸಮಸ್ಯೆ ಇರುವವರನ್ನು ಹುಡುಕಿ, ಅವರನ್ನು ಭೇಟಿಯಾಗಿ ತಾನೊಬ್ಬ ಸಿಸಿಬಿ ಇನ್‌ಸ್ಪೆಕ್ಟರ್ ಎಂದು ಪರಿಚಯಿಸಿಕೊಳ್ಳುತ್ತಿದ್ದ. ನಂತರ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ದೂರುದಾರ ಮಹಿಳೆ ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ಎರಡು ವರ್ಷದ ಹಿಂದೆ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿದ್ದ ಸ್ನೇಹಿತರೊಬ್ಬರನ್ನು ನೋಡಲು ಹೋಗಿದ್ದರು. ಆಗ ಮಹಿಳೆಯನ್ನು ಗಮನಿಸಿದ ಆರೋಪಿ, ತಾನೊಬ್ಬ ಸಿಸಿಬಿ ಇನ್‌ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದಾನೆ.
ತನಗೆ ಕೆಲ ಉನ್ನತ ಅಧಿಕಾರಿಗಳ ಪರಿಚಯವಿದ್ದು, ಯಾವುದಾದರೂ ಸಮಸ್ಯೆಯಿದ್ದರೆ ಬಗೆಹರಿಸುವುದಾಗಿ ನಂಬಿಸಿದ್ದ. ಆತನ ಮಾತು ನಂಬಿದ ಮಹಿಳೆ, ತಮ್ಮ ಸಮಸ್ಯೆಯನ್ನು ಆತನ ಬಳಿ ಹೇಳಿಕೊಂಡಿದ್ದರು. ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಅವರಿಂದ ಹಂತ-ಹಂತವಾಗಿ ಒಂದು ಲಕ್ಷ ರೂ. ಪಡೆದಿದ್ದಾನೆ ಎಂದು ಪೊಲೀಸರು ಹೇಳಿದರು.
ನಂತರ 2017ರ ಡಿಸೆಂಬರ್‌ನಲ್ಲಿ ಜೆ.ಕೆ.ಡಬ್ಲೂ ಲೇಔಟ್‌ನಲ್ಲಿ ತನ್ನ ಪ್ಲಾಟ್ ಇದ್ದು, “ನೀವು ಅಲ್ಲಿಗೆ ಹೋಗಿ ವಾಸ ಮಾಡಿ’ ಎಂದು ಹೇಳಿ, ಅವರ ಬಳಿಯಿದ್ದ ಟೈಲರಿಂಗ್ ಯಂತ್ರ, ದ್ವಿಚಕ್ರ ವಾಹನ, ಮೂರು ಮೊಬೈಲ್‌ಗಳು ಪಡೆದುಕೊಂಡಿದ್ದಾನೆ. ಆರೋಪಿಯ ವರ್ತನೆಯಿಂದ ಅನುಮಾನಗೊಂಡ ಮಹಿಳೆ, ವಿಚಾರಿಸಿದಾಗ ನಕಲಿ ಸಿಸಿಬಿ ಇನ್‌ಸ್ಪೆಕ್ಟರ್ ಎಂಬುದು ಗೊತ್ತಾಗಿದೆ.
2018 ಮೇ ತಿಂಗಳಲ್ಲಿ ಮಹಿಳೆ ರಾಜಾಜಿನಗರದ ಮೆಟ್ರೋ ನಿಲ್ದಾಣದ ಬಳಿ ಆರೋಪಿ ಜಯರಾಮ್‌ರನ್ನು ಭೇಟಿಯಾಗಿದ್ದರು. ಈ ವೇಳೆ ಮಹಿಳೆ, “ನೀನು ಪೊಲೀಸ್ ಇನ್‌ಸ್ಪೆಕ್ಟರ್ ಅಲ್ಲ ಎಂಬುದು ಗೊತ್ತಾಗಿದೆ. ಕೂಡಲೇ ಕೊಟ್ಟಿರುವ ಹಣ, ವಾಹನ ವಾಪಸ್ ಕೊಡುವಂತೆ ಕೇಳಿಕೊಂಡಿದ್ದಾರೆ’.
ಆಗ ಆರೋಪಿ ಜಯರಾಮ್ ಮಹಿಳೆಯನ್ನು ಬೆದರಿಸಿ, ಈ ಬಗ್ಗೆ ಹೊರಗಡೆ ಮಾತನಾಡಿದರೆ, ನಿನ್ನ ಗಂಡನಿಗೆ ತಿಳಿಸುವುದಾಗಿ ಹೇಳಿದ್ದಾನೆ. ಹೀಗಾಗಿ ಆರೋಪಿ ವಿರುದ್ಧ ಮಹಿಳೆ ಮಾ.10ರಂದು ದೂರು ನೀಡಿದ್ದರು ಎಂದು ಪೊಲೀಸರು ಹೇಳಿದರು. ಬಳಿಕ ಪೋನ್ ನಂಬರ್ ತೆಗೆದುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.