ಬೆಂಗಳೂರು: ರೆಸಿಡೆನ್ಸಿ ರಸ್ತೆಯ ಐಶಾರಾಮಿ ಡ್ಯಾನ್ಸ್‌ಬಾರ್‌ನಲ್ಲಿ ರೌಡಿ ಶೀಟರ್ ಗಿರಿ ಎಂಬಾತ ಶುಕ್ರವಾರ ರಾತ್ರಿ ಹುಟ್ಟುಹಬ್ಬ ಆಚರಣೆ ನಡೆಸುತ್ತಿದ್ದ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ಮಾಡಿ ಹಲರನ್ನು ಬಂಧಿಸಿದ್ದಾರೆ. ಆದರೆ, ಪೊಲೀಸರ ದಾಳಿ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆ ಅರ್ಧದಲ್ಲಿಯೇ ಮೊಟಕುಗೊಳಿಸಿ ರೌಡಿ ಶೀಟರ್ ಪರಾರಿಯಾಗಿದ್ದಾನೆ.
ಟೈಮ್ಸ್ ಬಾರ್ ರೆಸ್ಟೋರೆಂಟ್ ಡ್ಯಾನ್ಸ್ ಬಾರ್‌ನಲ್ಲಿ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಯುವತಿಯರಿಂದ ಅಶ್ಲೀಲ ನೃತ್ಯ ಹಾಗೂ ಕುಣಿಗಲ್ ಗುರಿ ಹುಟ್ಟುಹಬ್ಬ ಆಚರಣೆ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಗಿರಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು ಡ್ಯಾನ್ಸ್‌ಬಾರ್‌ನ ಸಿಬ್ಬಂದಿ ಸೇರಿ 237 ಜನರನ್ನು ಬಂಧಿಸಿದ್ದು, 9.82 ಲಕ್ಷ ರೂ. ಜಪ್ತಿಪಡಿಸಿಕೊಂಡಿದ್ದಾರೆ. ಜತೆಗೆ, ಉತ್ತರ ಭಾರತ ಮೂಲದ 266 ಜನ ಹುಡುಗಿಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಲ್ಡ್ ಟವರ್‌ನಲ್ಲಿ ನಡೆಯುತ್ತಿದ್ದ ಟೈಮ್ಸ್ ಬಾರ್ ರೆಸ್ಟೋರೆಂಟ್‌ನಲ್ಲಿ ಬಿಗ್ ಬಾಸ್ ಟೈಮ್ಸ್, ಬಾಲಿವುಡ್ ಟೈಮ್ಸ್, ಪ್ಯಾರೀಸ್ ಟೈಮ್ಸ್, ಟೋಪಾಜ್ ಬಟರ್‌ಪ್ಲೆ, ರಾಜ್ ಧನ್‌ಬೀರ್ ಹೆಸರುಗಳಲ್ಲಿ ಒಟ್ಟು ಏಳು ಹಾಲ್‌ಗಳಿವೆ. ಏಳು ಹಾಲ್‌ಗಳಲ್ಲಿ ಯುವತಿಯಿಂದ ಅಶ್ಲೀಲ ನೃತ್ಯ ಮಾಡಿಸಲಾಗುತ್ತಿತ್ತು.
ಜೂನ್ 14ರಂದು ಹುಟ್ಟುಹಬ್ಬದ ಆಚರಣೆಗೆ ಕುಣಿಗಲ್ ಗಿರಿ ಬಾಲಿವುಡ್ ಟೈಮ್ಸ್ ಹೆಸರಿನ ಹಾಲ್ ಬುಕ್ ಮಾಡಿಕೊಂಡಿದ್ದ. ಅದೇ ಹಾಲ್‌ನಲ್ಲಿ ಗಿರಿಗೆ ಜನ್ಮದಿನದ ಶುಭಾಶಯ ಕೋರಿ ಕಾರ್ಡ್ಸ್ ಅಂಟಿಸಲಾಗಿತ್ತು. ಯುವತಿಯರ ನೃತ್ಯವೂ ನಡೆದಿದೆ.
ಕಳೆದ ಒಂದು ತಿಂಗಳ ಹಿಂದೆ ಅಪರಾಧಿಕ ಕೃತ್ಯದ ಸಂಬಂಧ ಸಿಸಿಬಿ ಪೊಲೀಸರು ಗಿರಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನಿನ ಆಧಾರದಲ್ಲಿ ಬಿಡುಗಡೆಗೊಂಡಿದ್ದ ಗಿರಿ ಅಪರಾಧಿಕ ಕೃತ್ಯಗಳಲ್ಲಿ ಸಕ್ರಿಯಗೊಂಡಿರುವ ಬಗ್ಗೆ ಮಾಹಿತಿ ಬಂದಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.