ಬೆಂಗಳೂರು: ಮಂಗಳವಾರ ಬೆಳಗಿನ ಜಾವ 5 ಗಂಟೆ ವೇಳೆಗೆ ಸಿಸಿಬಿ ತಂಡವು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿ ಗಾಂಜಾ ಸೇದುವ ಪೈಪ್‌ಗ್ಳು ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಇಬ್ಬರು ಡಿಸಿಪಿಗಳು ಹಾಗೂ ಮೂವರು ಎಸಿಪಿ, 15 ಮಂದಿ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಮಂಗಳವಾರ ಮುಂಜಾನೆ ಐದು ಗಂಟೆಗೆ ದಾಳಿ ನಡೆಸಿದರು. ಈ ವೇಳೆ ಕೈದಿಗಳಿರುವ ಪ್ರತಿ ಬ್ಯಾರಕ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗಾಂಜಾ ಸೇದುವ ಪೈಪ್‌ಗ್ಳು ಪತ್ತೆಯಾಗಿವೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.
ಜೈಲಿನಿಂದಲೇ ಅಪರಾಧ ಚಟುವಟಿಕೆ ನಿರ್ವಹಣೆ: ಅಪರಾಧ ಕೃತ್ಯ ಎಸಗಿ ಕೇಂದ್ರ ಕಾರಾಗೃಹ ಸೇರಿರುವ ರೌಡಿ ಶೀಟರ್‌ಗಳು, ಜೈಲಿನೊಳಗೆ ಕುಳಿತೇ ತಮ್ಮ ಸಹಚರರ ಮೂಲಕ ಹೊರ ಜಗತ್ತಿನಲ್ಲಿ ಅಪರಾಧ ಚಟುವಟಿಕೆ ನಡೆಸುತ್ತಿರುವುದು ಕಂಡುಬಂದಿದೆ. ಅಪರಾಧ ಚಟುವಟಿಕೆಗಳಿಗೆ ಟಾಸ್ಕ್ ನೀಡುತ್ತಿದ್ದ ಹಾಗೂ ಕೆಲವರ ಕೊಲೆಗೆ ಸಂಚು ಕೂಡ ರೂಪಿಸಿ ಸಹಚರರಿಗೆ ಸುಪಾರಿ ನೀಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.
ಜೈಲಿನಲ್ಲಿರುವ ಕೈದಿಗಳಿಗೆ ಮಾದಕ ವಸ್ತು, ಮದ್ಯ, ಸಿಗರೇಟ್ ಮತ್ತು ಮೊಬೈಲ್, ಸಿಮ್‌ಕಾರ್ಡ್ ವ್ಯವಸ್ಥೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ದಿಢೀರ್ ದಾಳಿ ನಡೆಸಾಗಿದೆ.
4 ತಿಂಗಳ ಹಿಂದೆಯೂ ಶೋಧ: ಸಿಸಿಬಿ ಪೊಲೀಸರು ನಾಲ್ಕು ತಿಂಗಳ ಹಿಂದೆಯೂ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದರು. ಆ ವೇಳೆ ಪದೇ ಪದೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಸೇರಿರುವ ಕೈದಿಗಳ ಪ್ರತಿ ಬ್ಯಾರಕ್ ಅನ್ನು ಹುಡುಕಾಡಿದ್ದರು.
ಈ ವೇಳೆ ಅಪಾರ ಪ್ರಮಾಣದ ಮಾದಕ ವಸ್ತು, ಗಾಂಜಾ, ಚಾಕು, ಡ್ರ್ಯಾಗರ್, ಮೊಬೈಲ್‌ಗಳು, ಸಿಮ್‌ಕಾರ್ಡ್, ಪೆನ್‌ಡ್ರೈವ್‌ಗಳು ಒಳಗೊಡಂತೆ ಹಲವು ವಸ್ತುಗಳು ಪತ್ತೆಯಾಗಿದ್ದವು