Advertisement

ವಂಚಕರ ಮೇಲೆ ಸಿಸಿ ಕ್ಯಾಮರಾ ಕಣ್ಣು

12:30 PM Mar 10, 2017 | Team Udayavani |

ಮೈಸೂರು: ಕಾನೂನು ಸುವ್ಯವಸ್ಥೆ ಭಂಗಮಾಡುವ ಹಾಗೂ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಜತೆಗೆ ಹೊರವಲಯಗಳಲ್ಲಿ ಪೊಲೀಸ್‌ ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಹೇಳಿದರು.

Advertisement

ಪ್ರಸ್ತುತ ಮೈಸೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಅಪರಾಧ ಪ್ರಕರಣ ಗಳು ನಿಯಂತ್ರಣದಲ್ಲಿವೆ. ಆದರೆ, ಸಮಾಜದ ಶಾಂತಿ ಕದಡುವ ಕಿಡಿಗೇಡಿಗಳು, ಕೋಮು ಸಂಘರ್ಷ ಗಳಿಗೆ ಪ್ರಚೋದನೆ ನೀಡುವವರ ವಿರುದ್ಧ ಹೆಚ್ಚಿನ ನಿಗಾವಹಿಸಲಾಗಿದೆ. ಯಾವುದೇ ವ್ಯಕ್ತಿ ಕಾನೂನನ್ನು ಕೈಗೆತ್ತಿಕೊಂಡಲ್ಲಿ ಆತನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವ ಜತೆಗೆ ಅತ್ಯಂತ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗುವುದು.

ಇದೇ ರೀತಿಯಲ್ಲಿ ರೌಡಿ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗಿದ್ದು, ಪ್ರತ್ಯೇಕ ರೌಡಿ ನಿಗ್ರಹ ದಳ ರಚನೆ ಮಾಡಲಾಗಿದೆ. ಅಲ್ಲದೆ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಮಫ್ತಿ ಪೊಲೀಸರನ್ನು ಸಹ ನಿಯೋಜಿಸ ಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

25 ಹೊಸ ವಾಹನ ವ್ಯವಸ್ಥೆ: ನಗರ ಪ್ರದೇಶಗಳು ಮಾತ್ರವಲ್ಲದೆ ಹೊರವಲಯಗಳಲ್ಲಿ ಅಪರಾಧ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಲು ಹೆಚ್ಚಿನ ನಿಗಾ ಇಡಲಾಗುತ್ತಿದೆ. ಇದಕ್ಕಾಗಿ ಹೊರ ವಲಯಗಳಲ್ಲಿ ಪೊಲೀಸ್‌ ಗಸ್ತು ವ್ಯವಸ್ಥೆಯನ್ನು ಹೆಚ್ಚು ಮಾಡಲಾಗುತ್ತಿದ್ದು, ಈ ಹಿಂದೆ ಪೊಲೀಸ್‌ ಗಸ್ತು ವ್ಯವಸ್ಥೆಗಾಗಿ ಕೇವಲ 15 ವಾಹನಗಳಿತ್ತು. ಆದರೆ, ಇದೀಗ 40 ವಾಹನಗಳಿದ್ದು, ಆ ಮೂಲಕ ಪೆಟ್ರೋಲಿಂಗ್‌ ಮಾಡಲೆಂದು 25 ಹೊಸ ವಾಹನ ಗಳನ್ನು ಒದಗಿಸಲಾಗಿದೆ ಎಂದರು.

ಹೊರ ವಲಯದಲ್ಲೂ ಕ್ಯಾಮರಾ ಅಳವಡಿಕೆ: ನಗರದಲ್ಲಿ ಮೇಲಿಂದ ಮೇಲೆ ಸಂಭವಿಸುವ ಸರಗಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಇದಕ್ಕಾಗಿ ನಗರದ ಪ್ರಮುಖ ವೃತ್ತಗಳು, ಜನನಿಬಿಡ‌ ಪ್ರದೇಶಗಳಲ್ಲಿ ಈಗಾಗಲೇ ಸಾಕಷ್ಟು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. 

Advertisement

ಇದಲ್ಲದೆ ಮುಂದಿನ ದಿನಗಳಲ್ಲಿ ನಗರದ ಹೊರವಲಯಗಳಲ್ಲೂ ಸಹ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗುವುದು. ಇದರಿಂದ ನಗರಕ್ಕಾಗಮಿಸುವ ವಾಹನ, ಹೋಗುವ ವಾಹನಗಳ ಬಗ್ಗೆ ನಿಗಾ ವಹಿಸಲು ಸಹಾಯವಾಗಲಿದೆ ಎಂದ ಅವರು, ಮಹಿಳೆಯರ ರಕ್ಷಣೆ ವಿಚಾರದಲ್ಲೂ ಸಹ ಪೊಲೀಸ್‌ ಇಲಾಖೆ ಆದ್ಯತೆ ಮೇರೆಗೆ ಕೆಲಸ ಮಾಡಲಿದೆ ಎಂದು ಹೇಳಿದರು. ಉಳಿದಂತೆ ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ.

ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚವ ಜತೆಗೆ ಸರಗಳ್ಳತನ, ರೌಡಿಸಂ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ. ಅಲ್ಲದೆ ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಉತ್ತಮಗೊಳಿಸಲಾಗಿದೆ. ಆದರೆ, ಸಂಚಾರ ನಿಯಮಗಳ ಪಾಲನೆಯಲ್ಲಿ ಪೊಲೀಸರ ಜತೆಗೆ ಸಾರ್ವಜನಿಕರು ಸಹಕರಿಸಬೇಕಿದ್ದು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ದೇಶದಲ್ಲಿ ಅಪಘಾತದಿಂದ 1.46 ಲಕ್ಷ ಮಂದಿ ಹಾಗೂ ರಾಜ್ಯದಲ್ಲಿ 11,500 ಮಂದಿ ಮೃತಪಟ್ಟಿದ್ದು, ಇದಕ್ಕೆ ಸಂಚಾರ ನಿಯಮಗಳ ಉಲ್ಲಂಘನೆಯೇ ಕಾರಣವಾಗಿದೆ ಎಂದರು.

ಇದಕ್ಕೂ ಮುನ್ನ ನಗರಕ್ಕಾಗಮಿಸಿದ ಅವರು, ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದರು. ಆ ಮೂಲಕ ಕಾನೂನು ಸುವ್ಯವಸ್ಥೆ, ಅಪರಾಧ, ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್‌ ಆಯುಕ್ತ ಡಾ. ಎ. ಸುಬ್ರಹ್ಮಣ್ಯೇಶ್ವರರಾವ್‌, ಐಜಿಪಿ ವಿಪುಲ್‌ಕುಮಾರ್‌, ಎಸ್ಪಿ ರವಿ ಡಿ. ಚನ್ನಣ್ಣನವರ, ಡಿಸಿಪಿಗಳಾದ ಡಾ. ಎಚ್‌.ಟಿ. ಶೇಖರ್‌, ರುದ್ರಮುನಿ, ಬಿ.ವಿ. ಕಿತ್ತೂರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next