Advertisement

ಪಿಯುಸಿ ಪರೀಕ್ಷೆಗೆ ಸಿಸಿ ಕೆಮರಾ ಕಣ್ಗಾವಲು: ಸುರೇಶ್‌ ಕುಮಾರ್‌

09:19 AM Feb 13, 2020 | sudhir |

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸುವ ನಿಟ್ಟಿನಲ್ಲಿ ಈ ಬಾರಿ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸುರಕ್ಷಿತವಾಗಿ ರವಾನಿಸುವ ಮತ್ತು ಸಂರಕ್ಷಣೆ ದೃಷ್ಟಿಯಿಂದ ರಾಜ್ಯಮಟ್ಟದಲ್ಲಿ ವಿಶೇಷ ವಿಕ್ಷಣೆಯೊಂದಿಗೆ ಜಿಲ್ಲಾ ಮಟ್ಟದಲ್ಲೂ ನಿಯಂತ್ರಣ ಕೊಠಡಿಗಳಲ್ಲಿ ಸಿಸಿ ಕೆಮರಾದ ಮೂಲಕ 24 ಗಂಟೆಗಳ ಕಾಲವೂ ನಿರಂತರವಾಗಿ ನಿಗಾವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ.

Advertisement

ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಸಾಮಗ್ರಿ ರವಾನೆ ಮತ್ತು ಪರೀಕ್ಷಾ ಕೇಂದ್ರಗಳಿಂದ ಸಂಬಂಧಿಸಿದ ಮೌಲ್ಯಮಾಪನ ಕೇಂದ್ರಕ್ಕೆ ಉತ್ತರಪತ್ರಿಕೆ ರವಾನೆಯ ವಾಹನಗಳ ಚಲನವಲನಗಳ ಮೇಲೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗುವ ವಿಚಕ್ಷಣ ಕೇಂದ್ರದಿಂದಲೇ ವೀಕ್ಷಣೆ ಮತ್ತು ನಿಯಂತ್ರಣ ಮಾಡಲಾಗುತ್ತದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬುಧವಾರ ರೇಣುಕಾಚಾರ್ಯ ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಭಾಗದ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರೀಕ್ಷಾ ಕೆಲಸಗಳಿಗೆ ನಿಯೋಜಿತರಾದ ಪ್ರತಿಯೊಬ್ಬರೂ ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಸಹಕರಿಸಬೇಕು ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರು ಮಾತ್ರವೇ ಒಂದು ಬೇಸಿಕ್‌ ಮೊಬೈಲ್‌ ಸೆಟ್‌ ಬಳಸಲು ಅವಕಾಶವಿದ್ದು, ಇತರರಿಗೆ ಮೊಬೈಲ್‌ ಸೆಟ್‌ ಬಳಕೆಯನ್ನು ನಿಷೇಧಿಸಲಾಗಿದೆ. ವಿಶೇಷ ರಕ್ಷಣಾ ಲಕ್ಷಣಗಳನ್ನೊಳಗೊಂಡ 40 ಪುಟಗಳ ಉತ್ತರಪತ್ರಿಕೆಗಳನ್ನು ಈಗಾಗಲೇ ಸರಬರಾಜು ಮಾಡಲಾಗಿದೆ. ಈ ಬಾರಿ ಪರೀಕ್ಷೆಗೆ ಅನುಭವಿ ಪ್ರಾಚಾರ್ಯರುಗಳನ್ನು ಮುಖ್ಯಅಧೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಸಹಿತ ಪರೀಕ್ಷಾ ಕೆಲಸಗಳಲ್ಲಿ ತೊಡಗಿದವರಿಗೆ ಪರೀಕ್ಷಾ ಗುರುತಿನ ಚೀಟಿ ನೀಡಲಾಗುತ್ತದೆ. ಗುರುತಿನ ಚೀಟಿ ಹೊಂದಿದವರನ್ನು ಹೊರತುಪಡಿಸಿ ಯಾರಿಗೂ ಪರೀಕ್ಷಾ ಕೇಂದ್ರದೊಳಗೆ ಇಲ್ಲವೇ ಪರೀಕ್ಷಾ ಕೇಂದ್ರದ ಸುತ್ತಮುತ್ತ ಅವಕಾಶಗಳಿರುವುದಿಲ್ಲ ಎಂದು ಹೇಳಿದರು.

ಪಿಯು ಪರೀಕ್ಷೆಗೆ ರಾಜ್ಯದಲ್ಲಿ ಒಟ್ಟು 1,016 ಪರೀಕ್ಷಾ ಕೇಂದ್ರಗಳಿದ್ದು, 6,80,000 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. 2,17,000 ವಿಜ್ಞಾನ, 2,61,000 ವಾಣಿಜ್ಯ, 2,01,000 ಕಲಾ ವಿಭಾಗದಲ್ಲಿ ಪರೀಕ್ಷಾರ್ಥಿಗಳಿದ್ದಾರೆ. ಈಗಾಗಲೇ ಪ್ರವೇಶಪತ್ರಗಳನ್ನು ಒದಗಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಮ್ಮತಮ್ಮ ಪರೀಕ್ಷಾ ಕೇಂದ್ರಗಳಿಂದ ಯಾವುದೇ ರೀತಿಯಲ್ಲೂ ಒಂದೇ ಒಂದು ದೂರು ಬಾರದಂತೆ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಕಿರಿಮಾತು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next