Advertisement

ವಾಣಿಜ್ಯ ಸಂಕೀರ್ಣಗಳಿಗೆ ಸಿಸಿ ಕೆಮರಾ ಕಡ್ಡಾಯ

10:51 AM Jul 25, 2018 | Team Udayavani |

ಹಿತದೃಷ್ಟಿ ಯಿಂದ ಪ್ರತಿ ವಾಣಿಜ್ಯ ಸಂಕೀರ್ಣಕ್ಕೂ ಸಿಸಿಟಿವಿ ಅಳವಡಿಸುವುದು ಕಡ್ಡಾಯ. ಇಂತಹದ್ದೊಂದು ಆದೇಶ ಪೊಲೀಸ್‌ ವೃತ್ತ ನಿರೀಕ್ಷಕರಿಗೆ ರವಾನೆಯಾಗಿದೆ. ಸದ್ಯದಲ್ಲೇ ಇದು ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ಪುತ್ತೂರು ಪೇಟೆಯಲ್ಲಿ ಪೊಲೀಸರ ಕಾರ್ಯಾಚರಣೆ ಪ್ರಾರಂಭಗೊಂಡಿದೆ.

Advertisement

ಸಾರ್ವಜನಿಕ ಸುರಕ್ಷತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು ಬಂದು ಹೋಗುವ ಸ್ಥಳಗಳ ಸಹಿತ ಯಾವುದೇ ವಾಣಿಜ್ಯ ಮಳಿಗೆ, ಸಂಸ್ಥೆಗಳು, ಸಂಕೀರ್ಣ, ಧಾರ್ಮಿಕ ಕೇಂದ್ರಗಳಲ್ಲಿ ಇನ್ನು ಮುಂದೆ ಪ್ರವೇಶ ನಿಯಂತ್ರಣ ಸಾಧನ ಹಾಗೂ ಸಿಸಿ ಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಸರಕಾರದ ಒಳಾಡಳಿತ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಅಪರಾಧಗಳ ನಿಯಂತ್ರಣಕ್ಕಾಗಿ ‘ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮ) ಜಾರಿ ಕಾಯ್ದೆ 2017ರ ಪ್ರಕಾರ ಒಳಾಡಳಿತ ಇಲಾಖೆಯು ‘ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮ) ಜಾರಿ ಅಧಿನಿಯಮ 2018’ನ್ನು ಪ್ರಕಟಿಸಿದೆ. ಈ ಕಾನೂನನ್ನು 2018ನೇ ಜು. 28ರಿಂದ ಜರಗಿಸಲು ಸಂಬಂಧಿಸಿದ ಇಲಾಖೆಗಳಿಗೆ ಅಧಿಸೂಚನೆ ಯನ್ನು ಹೊರಡಿಸಿದೆ ಎಂದು ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌
ತಿಳಿಸಿದ್ದಾರೆ. 

ವೃತ್ತ ನಿರೀಕ್ಷಕರಿಗೆ ಜವಾಬ್ದಾರಿ
ಈ ಕಾಯ್ದೆಗೆ ಸಂಬಂಧಿಸಿದ ಅಧಿಕಾರವನ್ನು ಪೊಲೀಸ್‌ ಇಲಾಖೆಗೆ ನೀಡಲಾಗಿದೆ. ಮೊದಲ ಹಂತದಲ್ಲಿ ಎಲ್ಲ ವಾಣಿಜ್ಯ ಮಳಿಗೆಗಳ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಬೇಕಾಗಿದೆ. ಈ ಕೆಲಸವನ್ನು ನಗರ ವ್ಯಾಪ್ತಿಯಲ್ಲಿ ಪೊಲೀಸ್‌ ನಿರೀಕ್ಷಕರು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವೃತ್ತ ನಿರೀಕ್ಷಕರು ನಿಭಾಯಿಸಲಿದ್ದಾರೆ. ಬಳಿಕ ಮೇಲ್ವಿಚಾರಣಾ ಸಮಿತಿ ರಚಿಸಿಕೊಂಡು ಕಾಯ್ದೆಯನ್ನು ಜಾರಿಗೆ ತರಬೇಕಿ ದೆ. ವೃತ್ತ ನಿರೀಕ್ಷಕರು ವರದಿ ನೀಡಿದ ಬೆನ್ನಿಗೆ ಮೇಲ್ವಿಚಾರಣಾ ಸಮಿತಿಯೂ ಜಾರಿಗೆ ಬರಲಿದೆ. ಈ ಸಮಿತಿ ತಿಳಿಸಿದ ರೀತಿಯಲ್ಲಿ ವಾಣಿಜ್ಯ ಸಂಕೀರ್ಣಗಳಲ್ಲಿ ಸಲಕರಣೆಗಳನ್ನು ಅಳಡಿಸಬೇಕಾಗುತ್ತದೆ. 30 ದಿನಗಳ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಹೈ ರೆಸಲ್ಯೂಷನ್‌ ಕ್ಯಾಮೆರಾ ಅಳವಡಿಸಬೇಕು. ನಿಗದಿತ ನಮೂನೆಯಲ್ಲಿ ಇದನ್ನು ಅಳವಡಿಸಬೇಕಾಗಿದೆ.

ತಪ್ಪಿದಲ್ಲಿ ದಂಡವೂ ಇದೆ
ಪ್ರತಿ 3 ತಿಂಗಳಲ್ಲಿ ಈ ಸಾಧನಗಳ ಕಾರ್ಯವೈಖರಿ ಬಗ್ಗೆ ಪೊಲೀಸ್‌ ನಿರೀಕ್ಷಕರು ಪರಿಶೀಲನೆ ನಡೆಸಬೇಕು. ಲೋಪಗಳು ಕಂಡುಬಂದರೆ ಮೊದಲ ತಿಂಗಳು 5 ಸಾವಿರ ರೂ., 2ನೇ ತಿಂಗಳು 10 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಬಳಿಕವೂ ಈ ಬಗ್ಗೆ ಮಾಲಕರು ಕ್ರಮ ಕೈಗೊಳ್ಳದೇ ಇದ್ದರೆ, ಪೊಲೀಸ್‌ ಇಲಾಖೆಯ ಮೇಲ್ವಿಚಾರಣಾ ಸಮಿತಿಗೆ ವರದಿ ಸಲ್ಲಿಸಲಾಗುತ್ತದೆ.ಅನಂತರ ಶೋಕಾಸ್‌ ನೋಟಿಸ್‌ ನೀಡಿ 24 ಗಂಟೆಯ ಅವಧಿಯಲ್ಲಿ ಕಟ್ಟಡವನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ.

Advertisement

ಪರಿಣತರ ನೇಮಕ
ಸಿಸಿ ಕೆಮರಾದ ತಾಂತ್ರಿಕ ನಿರ್ವಹಣೆಗಾಗಿ ಪರಿಣತಿ ಪಡೆದ ಓರ್ವ ವ್ಯಕ್ತಿಯನ್ನು ನೇಮಕ ಮಾಡಬೇಕು. ಕೆಮರಾ ಸಹಿತ ಎಲ್ಲ ನಿರ್ವಹಣೆ ಜವಾಬ್ದಾರಿ ಆಯಾ ಕಟ್ಟಡ ಮಾಲಕರದ್ದೇ ಆಗಿದೆ. ಅಲ್ಲದೆ, ಮೇಲ್ವಿಚಾರಣ ಸಮಿತಿ ತಿಳಿಸಿದ ರೀತಿಯಲ್ಲೇ ಸಾಧನಾ ಸಲಕರಣೆಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಲಾಗಿದೆ.

ಅಪರಾಧ ನಿಯಂತ್ರಣ
ಪೊಲೀಸ್‌ ಇಲಾಖೆಯ ಸೂಚನೆಯಂತೆ ಪುತ್ತೂರು, ಸುಳ್ಯ, ಉಪ್ಪಿನಂಗಡಿಯ ಸಾರ್ವಜನಿಕ ಸ್ಥಳಗಳಲ್ಲಿ, ಹಲವಾರು ಅಂಗಡಿ, ವಾಣಿಜ್ಯ ಸಂಕೀರ್ಣ, ಮನೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಿದ್ದೇನೆ. ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಸಂದರ್ಭವೂ ಗದ್ದೆಗೆ ಸಿಸಿ ಕೆಮರಾ ಅಳವಡಿಸಲಾಗಿದೆ. ಭದ್ರತೆ, ಶಿಸ್ತಿನ ದೃಷ್ಟಿಯಿಂದ ಇದು ತುಂಬಾ ಅವಶ್ಯ ಸಿಸಿ ಕೆಮರಾದಿಂದ ಅಪರಾಧ, ಕಳ್ಳತನ, ದರೋಡೆ ನಿಯಂತ್ರಿಸಬಹುದು.
– ರೂಪೇಶ್‌ ಶೇಟ್‌,
ಸಿಸಿಟಿವಿ ತಜ್ಞ 

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next