ಕೊಪ್ಪಳ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 14 ಭಕ್ತರು ಸಾವನ್ನಪ್ಪಿದ ಬೆನ್ನಲ್ಲೇ ಮುಜರಾಯಿ ಇಲಾಖೆ ಎಚ್ಚೆತ್ತುಕೊಂಡಿದ್ದು, ದೊಡ್ಡ ಮಟ್ಟದ ಪ್ರಸಾದ ವ್ಯವಸ್ಥೆ ಕೈಗೊಳ್ಳುವವರಿಗೆ ಕೆಲವು ನಿಬಂಧನೆ ಹಾಕಿ ಸುತ್ತೋಲೆ ಹೊರಡಿಸಿದೆ. ಈ ಬೆಳವಣಿಗೆಯಿಂದಾಗಿ ಜಿಲ್ಲೆಯ ದೊಡ್ಡ ಪ್ರಮಾಣದಲ್ಲಿ ಪ್ರಸಾದ ವ್ಯವಸ್ಥೆ ಮಾಡುವ ಮಠಗಳು, ಸಾಮೂಹಿಕ ವಿವಾಹ ಆಯೋಜಿಸುವ ಸಂಘಟಕರು ಎಚ್ಚೆತ್ತುಕೊಂಡಿದ್ದಾರೆ.
ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ಮೂಲಕ ಹೊರಡಿಸಿದ ಆದೇಶ ನಿಜಕ್ಕೂ ಒಳ್ಳೆಯ ಬೆಳವಣಿಗೆ. ಮಠಗಳು, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಸಂಘಟಕರು ಇನ್ಮುಂದೆ ಆಹಾರ ಪದಾರ್ಥ ತಯಾರು ಮಾಡುವ ಕುರಿತು ಹೆಚ್ಚಿನ ಕಾಳಜಿ ವಹಿಸಲೇ ಬೇಕಾಗುತ್ತದೆ. ರಾಜ್ಯ ಸರ್ಕಾರವೂ ಸಹಿತ ಆಹಾರ ಪದಾರ್ಥ ಸೇವನೆ ಮಾಡಿದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಕಾಲ ಕಾಲಕ್ಕೆ ಧಾರ್ಮಿಕ ದತ್ತಿ ಇಲಾಖೆ ಮೂಲಕ ಸಾರ್ವಜನಿಕರಿಗೆ, ಆಡಳಿತ ಮಂಡಳಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎನ್ನುತ್ತಿದ್ದಾರೆ ಜಿಲ್ಲೆಯ ವಿಚಾರವಾದಿಗಳು.
ಕೊಪ್ಪಳ ಜಿಲ್ಲೆ ಹಿಂದುಳಿದ ಪ್ರದೇಶವಾಗಿದ್ದರೂ ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ. ದೇವಸ್ಥಾನಗಳಲ್ಲಿ ಪ್ರವಚನ, ಕೀರ್ತನೆ, ಉತ್ಸವ, ರಥೋತ್ಸವ, ಆರಾಧನೆ ಕಾಲ ಕಾಲಕ್ಕೆ ನಡೆಯುತ್ತಿರುತ್ತವೆ. ಇಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಸಾದ ವ್ಯವಸ್ಥೆ ಇರುತ್ತದೆ. ಅವರು ಇನ್ಮುಂದೆ ಸರ್ಕಾರದ ಆದೇಶ ಪಾಲಿಸಲೇ ಬೇಕಿದೆ. ನಿರ್ಲಕ್ಷಿಸಿದರೆ ಪ್ರಸಾದ ಉಸ್ತುವಾರಿ ನಿಭಾಯಿಸುವ ವ್ಯಕ್ತಿಗಳೇ ಅಪರಾಧ ಹೊರಬೇಕಾಗುತ್ತದೆ. ಹುಲಿಗೆಮ್ಮ ದೇವಸ್ಥಾನದಲ್ಲಿ ಜಾಗೃತಿ: ಸರ್ಕಾರ ಆದೇಶ ಹೊರಡಿಸುವ ಮೊದಲೇ ಜಿಲ್ಲೆಯ ಪ್ರಸಿದ್ಧಿ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಕೆಲವು ವರ್ಷಗಳಿಂದ ಪ್ರಸಾದ ವ್ಯವಸ್ಥೆ ನಡೆಯುತ್ತಿದ್ದು, 2 ವರ್ಷದ ಹಿಂದೆಯೇ ಅಡುಗೆ ತಯಾರು ಮಾಡುವ ಸ್ಥಳ, ಪ್ರಸಾದ ಭವನ, ಭಕ್ತರ ಹಾಲ್ ಸೇರಿದಂತೆ ಒಟ್ಟು 8 ಕಡೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಿದೆ. ಅಲ್ಲದೇ ಅಡುಗೆ ಕೋಣೆಯಲ್ಲಿ ಬಾಣಸಿಗರನ್ನು ಬಿಟ್ಟು ಮತ್ತ್ಯಾರನ್ನೂ ಒಳಗಡೆ ಪ್ರವೇಶಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರತಿ ತಿಂಗಳು 15 ಸಾವಿರ ಜನರು ಪ್ರಸಾದ ಸವಿಯುತ್ತಿದ್ದು, ಯಾವುದೇ ತೊಂದರೆ ಉಂಟಾಗದಂತೆ ನಿಗಾವಹಿಸಿ ಎಲ್ಲರ ಗಮನ ಸೆಳೆದಿದೆ. ಪ್ರಸಾದ ಹಾಗೂ ಸ್ವಚ್ಛತೆಗಾಗಿ 16 ಜನ ನಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕನಕಗಿರಿ ದೇವಸ್ಥಾನದಲ್ಲೂ ಪ್ರಸಾದ: ಕನಕಗಿರಿಯ ಕನಕಚಲಾಪತಿ ದೇವಸ್ಥಾನದಲ್ಲೂ ಇತ್ತೀಚೆಗೆ ಪ್ರಸಾದ ಸೇವೆ ಆರಂಭಿಸಲಾಗಿದೆ. ಇಲ್ಲಿ ಭಕ್ತ ಸಂಖ್ಯೆ ಸ್ವಲ್ಪ ಕಡಿಮೆ ಇರುತ್ತದೆ. ಪ್ರತಿ ಅಮವಾಸ್ಯೆ ದಿನದಂದು ಭಕು¤ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆಗ ಊಟ ತಯಾರು ಮಾಡುವುದು, ವಿತರಣೆಯ ಬಗ್ಗೆ ಸೂಚನೆ ನೀಡಲಾಗುತ್ತಿದೆ. ಆದರೆ, ಇಲ್ಲಿ ಯಾವುದೇ ಸಿಸಿ ಕ್ಯಾಮರಾ ಅಳವಡಿಕೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಅಳವಡಿಕೆ ಮಾಡುವ ಕುರಿತು ಆಡಳಿತ ಮಂಡಳಿ ಚಿಂತನೆ ನಡೆಸಿದೆ.
ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರಸಾದ ವ್ಯವಸ್ಥೆ ಮಾಡುವುದೆಂದರೆ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ. ಇಲ್ಲಿ ಜನರು ಭೇದ, ಭಾವ ಮರೆತು, ಭಾವೈಕ್ಯದಿಂದ ಜಾತ್ರೆಯಲ್ಲಿ ಪಾಲ್ಗೊಂಡು ಅನ್ನ ಪ್ರಸಾದ ಸವಿಯುತ್ತಾರೆ. ಗವಿಮಠವೂ ಸಹಿತ ಪ್ರಸಾದ ಪೂರೈಸುವ ವಿಭಾಗದಲ್ಲಿ ನುರಿತ ಬಾಣಸಿಗರನ್ನು ನೇಮಿಸುತ್ತಿದೆ. ಅಲ್ಲದೇ, ಆಹಾರ ಇಲಾಖೆಯ ಮೂಲಕ ಅನುಮತಿ ಪಡೆದು ಪರೀಕ್ಷೆ ಮಾಡಿಸುತ್ತಿದೆ. ಇದನ್ನು ಬಿಟ್ಟರೆ ಸಾಮೂಹಿಕ ಮದುವೆ, ಸಮಾರಂಭ ಆಯೋಜನೆ ಮಾಡುವ ಗಣ್ಯಾತೀತರು, ರಾಜಕಾರಣಿಗಳು, ಸಂಘಟಕರು ಇನ್ಮುಂದೆ ಸರ್ಕಾರದ ನಿಬಂಧನೆಗೆ ಒಮ್ಮತ ಸೂಚಿಸಲೇ ಬೇಕಿದೆ.
ರಾಜ್ಯ ಸರ್ಕಾರ ಮುಜರಾಯಿ ಇಲಾಖೆಯ ಮೂಲಕ ಆಹಾರ ತಯಾರಿಕೆ, ಪೂರೈಕೆಗೆ ದೇವಸ್ಥಾನ, ಮಠ, ಮಂದಿರಗಳಿಗೆ ಸಿಸಿ ಕ್ಯಾಮರಾ, ಆಹಾರ ಪರೀಕ್ಷೆಗೆ ಆದೇಶ ಮಾಡಿರುವುದು ಸರಿ. ಆದರೆ, ಪ್ರತಿ ದಿನವೂ ಅಧಿ ಕಾರಿಗಳು ಆಹಾರ ಪದಾರ್ಥ ಪರಿಶೀಲಿಸುವುದು ಕಷ್ಟದ ಕೆಲಸ. ಕಾಲ ಕಾಲಕ್ಕೆ ಸರ್ಕಾರವೇ ಸಾರ್ವಜನಿಕರಿಗೆ, ಆಡಳಿತ ಮಂಡಳಿಗೆ ಜಾಗೃತಿ ಮೂಡಿಸುವ ಅಗತ್ಯವಾಗಿದೆ.
ಮಹಾಂತೇಶ ಮಲ್ಲನಗೌಡರ, ಸಾಹಿತಿ
ದೇವಸ್ಥಾನದಲ್ಲಿ ನಾವು ಎರಡು ವರ್ಷದ ಹಿಂದೆಯೇ ಊಟ ತಯಾರಿಸುವ ಕೊಠಡಿ, ಪ್ರಸಾದ ನಿಲಯ, ಭಕ್ತರ ಹಾಲ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ್ದೇವೆ. ಪ್ರತಿ ತಿಂಗಳು ಅಡುಗೆ ತಯಾರಕರ ಸಭೆ ಕರೆದು ಜಾಗೃತಿ ಮೂಡಿಸುತ್ತಿದ್ದೇವೆ. ಆಹಾರ ಧಾನ್ಯಗಳ ಸ್ವಚ್ಛತೆ ಮಾಡಿಸುತ್ತಿದ್ದೇವೆ. ನಾವು ಆಹಾರದ ಬಗ್ಗೆ ಪ್ರತಿ ದಿನವೂ ನಿಗಾ ವಹಿಸುತ್ತೇವೆ.
ಸಿ.ಎಸ್.ಚಂದ್ರಮೌಳಿ,
ಹುಲಿಗೆಮ್ಮದೇವಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ
ದೊಡ್ಡ ದೊಡ್ಡ ಮಠಗಳಲ್ಲಿ ಪ್ರಸಾದ ವ್ಯವಸ್ಥೆಗೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಿ. ಆದರೆ ಸಣ್ಣ ಪುಟ್ಟ ಮಠಗಳಿಗೂ ಸಿ.ಸಿ ಕ್ಯಾಮರಾ ಅಳವಡಿಕೆ ಸೂಕ್ತವಲ್ಲ. ಪ್ರತಿ ದಿನ ಪ್ರಸಾದ ಪರೀಕ್ಷೆ ಮಾಡಿದರೆ ಅದು ಪ್ರಸಾದ ಅನಿಸಲ್ಲ. ಮಠದ ಭಕ್ತರೂ ಸಹಿತ ಪ್ರಸಾದದ ತಯಾರಿಕೆಯ ಬಗ್ಗೆ ನಿಗಾ ವಹಿಸಿರುತ್ತಾರೆ. ಪ್ರಸಾದದಲ್ಲಿ ಭಕ್ತಿ ಇರಬೇಕು. ಸರ್ಕಾರ ಆಹಾರ ವ್ಯವಸ್ಥೆಯ ಬಗ್ಗೆ ಕಾಲ ಕಾಲಕ್ಕೆ ಜಾಗೃತಿ ನೀಡಲಿ.
ಮಹಾದೇವ ದೇವರು,
ಅನ್ನದಾನೇಶ್ವರ ಶಾಖಾಮಠ, ಕುಕನೂರು.
ದತ್ತು ಕಮ್ಮಾರ