ನವದೆಹಲಿ: ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ನ್ಯಾಯಾಲಯದ ನೇತೃತ್ವದಲ್ಲಿ ತನಿಖೆ ನಡೆಸುವ ಬಗ್ಗೆ ನಿಲುವು ಕೇಳಿ ಕೇಂದ್ರ ಸರ್ಕಾರ ಮತ್ತು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ ದೆಹಲಿ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ. ಜತೆಗೆ ಹತ್ತನೇ ತರಗತಿಯ ಗಣಿತ ಪರೀಕ್ಷೆ ಯಾವಾಗ ನಡೆಯಲಿದೆ ಎಂದು ದೆಹಲಿ ಹೈಕೋರ್ಟ್‌ನ ಪ್ರಭಾರ ಮುಖ್ಯ ನ್ಯಾಯಮೂರ್ತಿ ಗೀತಾ ಮಿಶ್ರಾ ನೇತೃತ್ವದ ನ್ಯಾಯಪೀಠ ಪ್ರಶ್ನೆ ಮಾಡಿದೆ.
ಎನ್‌ಜಿಒವೊಂದು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕೋರ್ಟ್ ಉಸ್ತುವಾರಿಯಲ್ಲಿ ಏಕೆ ತನಿಖೆ ನಡೆಸಬಾರದು ಮತ್ತು ಅದಕ್ಕೆ ಸಿಬಿಎಸ್‌ಇ, ಕೇಂದ್ರ ಸರ್ಕಾರದ ಉತ್ತರವೇನು ಎಂದು ಪ್ರಶ್ನಿಸಿತು. ಹತ್ತನೇ ತರಗತಿ ಗಣಿತ ಪರೀಕ್ಷೆ ಯಾವಾಗ ನಡೆಸಲಾ ಗುತ್ತದೆ. ಜುಲೈ ವರೆಗೆ ವಿದ್ಯಾರ್ಥಿಗಳು ಆತಂಕ ದಿಂದ ಏಕೆ ಕಾಯಬೇಕು ಎಂದೂ ಕೇಳಿತು. ಜತೆಗೆ, ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡು ಏ.16ರ ಒಳಗಾಗಿ ಉತ್ತರಿಸುವಂತೆ ಸೂಚಿಸಿತು.
ಯಾವುದೇ ಸಂಬಂಧವಿಲ್ಲ: ಈ ನಡುವೆ ಭಾನುವಾರ ಬಂಧಿಸಲ್ಪಟ್ಟ ಮೂವರು ವ್ಯಕ್ತಿಗಳು ಮತ್ತು ಸಸ್ಪೆಂಡ್ ಆಗಿರುವ ಸಿಬಿಎಸ್‌ಇ ಅಧಿಕಾರಿ ನಡುವೆ ಯಾವುದೇ ಸಂಬಂಧ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಮುಂದಿನ ಹಂತದಲ್ಲಿ ಅಧಿಕಾರಿ ಮತ್ತು ಬಂಧಿತರಿಗೆ ಲಿಂಕ್ ಕಂಡು ಬಂದಲ್ಲಿ ಮತ್ತೆ ವಿಚಾರಣೆ ನಡೆಸುತ್ತೇವೆ ಎಂದಿದ್ದಾರೆ.
ವದಂತಿ ನಂಬಬೇಡಿ: ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಇನ್ನು ಯಾವುದೇ ವದಂತಿ, ಜಾಲತಾಣಗಳಲ್ಲಿ ಬರುವ ಮಾಹಿತಿಯನ್ನು ನಂಬಬೇಡಿ. ಅಂಥ ವರದಿಗಳಿದ್ದರೆ ಸಿಬಿಎಸ್‌ಇಗೆ ಮಾಹಿತಿ ನೀಡಿ ಎಂದು ವಿದ್ಯಾರ್ಥಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕೋರಿಕೊಂಡಿದೆ.
ಎನ್‌ಎಚ್‌ಆರ್‌ಸಿ ನೋಟಿಸ್: ಪ್ರಕರಣ ಸಂಬಂಧ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ, ಸಿಬಿಎಸ್‌ಇ ಅಧ್ಯಕ್ಷೆ, ದೆಹಲಿ ಪೊಲೀಸ್ ಆಯುಕ್ತರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ನೋಟಿಸ್ ಜಾರಿ ಮಾಡಿ, 4 ವಾರಗಳಲ್ಲಿ ಉತ್ತರಿಸುವಂತೆ ಸೂಚನೆ ನೀಡಿದೆ.
ಸೋರಿಕೆ ತಡೆಗೆ ಕ್ರಮ
ಗಣಿತ, ಇಕನಾಮಿಕ್ಸ್ ಪ್ರಶ್ನೆ ಪತ್ರಿಕೆ ಸೋರಿಕೆ ಯಿಂದ ಟೀಕೆಗೆ ಗುರಿಯಾಗಿರುವ ಸಿಬಿ ಎಸ್‌ಇ ಹೊಸ ವ್ಯವಸ್ಥೆಗೆ ಮೊರೆ ಹೋಗಿದೆ. ಗೂಢಲಿ ಪ್ಯಂತೀಕರಣ ವ್ಯವಸ್ಥೆ (ಎನ್‌ಕ್ರಿಪ್ಶನ್) ಯಲ್ಲಿ ಇನ್ನು ಮುಂದೆ ಆಯಾ ಶಾಲೆಗಳೇ ಪ್ರಶ್ನೆ ಪತ್ರಿಕೆ ಡೌನ್‌ಲೋಡ್ ಮಾಡಿಕೊಂಡು ಮುದ್ರಿಸಿ ಕೊಳ್ಳುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಕೆಲವೆಡೆ ಇದರಿಂದಾಗಿ ಪರೀಕ್ಷೆ ಆರಂಭದಲ್ಲಿ ವಿಳಂಬವೂ ಆಗಿದೆ.