Advertisement

ಸಿಬಿಎಸ್‌ಇ, ಐಸಿಎಸ್‌ಇ ಶಾಲೆ: ಕನ್ನಡ ಕಡ್ಡಾಯ

06:05 AM Oct 25, 2017 | Team Udayavani |

ಬೆಂಗಳೂರು: ಖಾಸಗಿ ಶಾಲೆಗಳು ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸಬೇಕು ಎಂದು ರಾಜ್ಯ ಸರಕಾರದ ಆದೇಶವು ಈ ಶಾಲೆಗಳ ಆಡಳಿತ ಮಂಡಳಿಗಳಲ್ಲಿ ಗೊಂದಲ ಸೃಷ್ಟಿಸಿದೆ.

Advertisement

ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳು ಮಾತ್ರ ರಾಜ್ಯ ಸರಕಾರದ ಅಧೀನಕ್ಕೆ ಬರುತ್ತವೆ. ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳು ರಾಜ್ಯ ಸರಕಾರದ ವ್ಯಾಪ್ತಿಗೆ ಬರುವುದಿಲ್ಲ. ಈ ಶಾಲೆಗಳ ಪಠ್ಯಕ್ರಮಕ್ಕೂ ರಾಜ್ಯ ಸರಕಾರಕ್ಕೂ ಸಂಬಂಧವೇ ಇಲ್ಲ. ಮಾನ್ಯತೆ ನವೀಕರಣ ಸಹಿತ ಪಠ್ಯಕ್ರಮ ಇತ್ಯಾದಿ ಎಲ್ಲವೂ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಮಂಡಳಿಯ ನಿಯಮದಂತೆ ನಡೆಯುತ್ತದೆ. ಹೀಗಾಗಿ ಕನ್ನಡ ಕಡ್ಡಾಯ ವಿಷಯದಲ್ಲಿ ಉಂಟಾಗಿರುವ ಗೊಂದಲವನ್ನು ಸರಿಪಡಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತೇವೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು ಹೇಳಿದ್ದಾರೆ.

ಸದ್ಯ ಪ್ರಚಲಿತದಲ್ಲಿರುವ ಪ್ರಸ್ತಾವನೆಯೊಂದರ ಪ್ರಕಾರ ಒಂದೊಮ್ಮೆ ಸಿಬಿಎಸ್‌ಇ ಬೋರ್ಡ್‌ ಹಿಂದಿ ಕಡ್ಡಾಯ ಮಾಡಿದರೆ, ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುತ್ತಿರುವ ರಾಜ್ಯದ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳ ಗತಿ ಏನು ಎಂಬ ಪ್ರಶ್ನೆಯೂ ಎದ್ದಿದೆ.

ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳು ಈಗಾಗಲೇ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಳವಡಿಸಿಕೊಂಡಿವೆ. ಆದರೆ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲಾಡಳಿತ ಮಂಡಳಿ ಕನ್ನಡವನ್ನು ಕಲಿಸುತ್ತಿಲ್ಲ ಎಂಬ ದೂರಿನಿಂದಾಗಿ ಎಲ್ಲ ಖಾಸಗಿ ಶಾಲೆಗಳಲ್ಲೂ ಕನ್ನಡ ಒಂದು ಭಾಷೆಯಾಗಿ ಕಲಿಸುವುದನ್ನು ಸರಕಾರ ಕಡ್ಡಾಯ ಮಾಡಿದೆ.
2017-18ನೇ ಸಾಲಿನ 1ನೇ ತರಗತಿ, 2018-19ರಲ್ಲಿ 1 ಮತ್ತು 2ನೇ ತರಗತಿ, ಹೀಗೆ 2026-27ರಲ್ಲಿ ಒಂದರಿಂದ 10ನೇ ತರಗತಿ ವಿದ್ಯಾರ್ಥಿಗೆ ಪ್ರಥಮ ಅಥವಾ ದ್ವಿತೀಯ ಭಾಷೆ ಕಡ್ಡಾಯವಾಗಿ ಕಲಿಸಬೇಕು ಎಂಬುದನ್ನು ರಾಜ್ಯಪತ್ರದಲ್ಲಿ ತಿಳಿಸಲಾಗಿದೆ.

ಹಾಗೆಯೇ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಲು ಬೇಕಾದ ಪಠ್ಯಪುಸ್ತಕ ಮತ್ತು ಯಾವ ವರ್ಷದಿಂದ ಯಾವ ತರಗತಿಗೆ ಯಾವ ಪಠ್ಯಕ್ರಮ ಎಂಬುದನ್ನು ಗೊತ್ತು ಮಾಡಿದೆ. ಈ ನಿಯಮ ಪಾಲಿಸದ ಶಾಲೆಗಳ ವಿರುದ್ಧ ಸಕ್ಷಮ ಪ್ರಾಧಿಕಾರದ ಮೂಲಕ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.

Advertisement

ದ್ವಂದ್ವ ಸರಿಪಡಿಸಿ
ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳು ರಾಜ್ಯ ಸರಕಾರದ ಅಧೀನಕ್ಕೆ ಬರುವುದಿಲ್ಲ. ರಾಜ್ಯ ಸರಕಾರ ಎರಡು ಭಾಷೆಯನ್ನು ಕಲಿಸುವ ತೀರ್ಮಾನ ಮಾಡುವ ಹಂತದಲ್ಲಿದೆ. ಇದರಿಂದ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಯಲ್ಲಿ ಕನ್ನಡ ಕಲಿಕೆಗೆ ಮತ್ತಷ್ಟು ಹೊಡೆತ ಬೀಳುವ ಎಲ್ಲ ಸಾಧ್ಯತೆ ಇದೆ. ಸಿಬಿಎಸ್‌ಇ ಅಥವಾ ಐಸಿಎಸ್‌ಇ ಶಾಲಾಡಳಿತ ಮಂಡಳಿ ಆಯಾ ಬೋರ್ಡ್‌ ಸೂಚನೆಯನ್ನು ಪಾಲಿಸದೇ ಇರಲು ಸಾಧ್ಯವಿಲ್ಲ. ಹೀಗಾಗಿ ದ್ವಂದ್ವ ಸರಿಪಡಿಸುವಂತೆ ಸರಕಾರದ ಮೊರೆ ಹೋಗುತ್ತೇವೆ. ಸರಕಾರ ಸರಿಪಡಿಸದೇ ಇದ್ದರೆ ಕೋರ್ಟ್‌ ಮೆಟ್ಟಿಲೇರುವ ಬಗ್ಗೆ ಚಿಂತನೆ ನಡೆಸಲಿದ್ದೇವೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next