ಹೊಸದಿಲ್ಲಿ: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ರವಿವಾರ ಪ್ರಕಟವಾಗಿದ್ದು, ನೋಯ್ಡಾದ ರಕ್ಷಾ ಗೋಪಾಲ್ ಶೇ.99.6ರಷ್ಟು ಅಂಕಗಳೊಂದಿಗೆ ಟಾಪರ್ ಎನಿಸಿಕೊಂಡಿದ್ದಾಳೆ. ಎರಡು ಮತ್ತು ಮೂರನೇ ಸ್ಥಾನ ಚಂಡೀಗಢದ ವಿದ್ಯಾರ್ಥಿಗಳಾದ ಭೂಮಿ ಸಾವಂತ್(ಶೇ.99.4) ಮತ್ತು ಆದಿತ್ಯ ಜೈನ್(ಶೇ.99.2) ಪಾಲಾಗಿದೆ. ಈ ಕುರಿತು ಮಾಹಿತಿ ನೀಡಿದ ಕೇಂದ್ರ ಎಚ್‌ಆರ್‌ಡಿ ಸಚಿವ ಪ್ರಕಾಶ್ ಜಾವಡೇಕರ್, ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಟ್ಟಾರೆ ಶೇಕಡಾವಾರು ಫಲಿತಾಂಶದಲ್ಲಿ ಇಳಿಮುಖವಾಗಿದ್ದು, ಶೇ.83.05ರಿಂದ ಶೇ.82ಕ್ಕಿಳಿದಿದೆ. ಆದರೆ, ಶೇ.95-100ರೊಳಗೆ ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷ 9,351 ಮಂದಿಯಿದ್ದರೆ ಈ ಬಾರಿ 10,091 ಮಂದಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ.
ಕ್ಯಾನ್ಸರ್ ವಿರುದ್ಧ ಹೋರಾಡಿ ಶೇ.95 ಅಂಕ ಗಳಿಸಿದ!
ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ.90 ಅನ್ನು ದಾಟಬೇಕು ಎಂಬ ರಾಂಚಿ ಯುವಕ ತುಷಾರ್ ರಿಷಿಯ ಗುರಿಯನ್ನು ಹಿಮ್ಮೆಟ್ಟಿಸುವಲ್ಲಿ ಕ್ಯಾನ್ಸರ್ ವಿಫಲವಾಗಿದೆ. ಈ ಹೋರಾಟದಲ್ಲಿ ರಿಷಿ ಗೆದ್ದಿದ್ದಾನೆ. ಈತ ಪ್ರತಿ 3 ತಿಂಗಳಿಗೊಮ್ಮೆ ಕ್ಯಾನ್ಸರ್ ಚಿಕಿತ್ಸೆಗಾಗಿ ದಿಲ್ಲಿಯ ಏಮ್ಸ್‌ಗೆ ಹೋಗಬೇಕಿತ್ತು. ಒಂದು ಕಡೆ, ಮಾರಕ ರೋಗದ ಭೀತಿಯಿದ್ದರೂ, ಹೆಚ್ಚುವರಿ ಕೋಚಿಂಗ್‌ಗೂ ಹೋಗದೆ ರಿಶಿ ಶೇ.95ರಷ್ಟು ಅಂಕ ಗಳಿಸಿದ್ದಾನೆ. ದೆಹಲಿ ವಿವಿಯಲ್ಲಿ ಇಂಗ್ಲಿಷ್ ಅಥವಾ ಅರ್ಥಶಾಸ್ತ್ರದಲ್ಲಿ ಪದವಿ ಪಡೆಯಬೇಕೆಂಬ ಆಸೆಯಿದೆ ಎಂದಿದ್ದಾನೆ ರಿಷಿ. ಈತ ‘ದಿ ಪೇಷೆಂಟ್ ಪೇಷಂಟ್’ (ಸಹನೆಯ ರೋಗಿ) ಎಂಬ ಪುಸ್ತಕವನ್ನೂ ಬರೆದಿದ್ದಾನೆ.
ಮಾಡರೇಷನ್ ವಿವಾದದಲ್ಲಿ ನಮ್ಮ ಸಚಿವಾಲಯ ಹಸ್ತಕ್ಷೇಪ ಮಾಡುತ್ತಿಲ್ಲ. ಈ ಬಗ್ಗೆ ಮಂಡಳಿಯೇ ನಿರ್ಧಾರ ಕೈಗೊಳ್ಳಲಿ. ಆದರೆ, ಯಾವುದೇ ಬದಲಾವಣೆಯನ್ನು ಶೈಕ್ಷಣಿಕ ಅವಧಿಯ ಮಧ್ಯೆ ಹಠಾತ್ತನೆ ಅನುಷ್ಠಾನಗೊಳಿಸುವುದು ಸರಿಯಲ್ಲ.
– ಪ್ರಕಾಶ್ ಜಾವಡೇಕರ್, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ