ಹುಬ್ಬಳ್ಳಿ: ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿರುವುದು ಸ್ವಾಗತಾರ್ಹ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ, ಇಡಿ, ಐಟಿಯಂತಹ ಸಂಸ್ಥೆಗಳನ್ನು ರಾಜಕೀಯ ವಿರೋಧಿ ಗಳನ್ನು ಹಣಿಯಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತುತ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಸಿಬಿಐಗೆ ತನಿಖೆಗೆ ವಹಿಸಿದಾಗ ಕೇಂದ್ರದಲ್ಲಿ ಬಿಜೆಪಿಯೇ ಅಧಿ ಕಾರದಲ್ಲಿತ್ತು.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅನುಮತಿ ಹಿಂಪಡೆದಿರುವುದರಲ್ಲಿ ತಪ್ಪಿಲ್ಲ. ಈ ಕುರಿತು ಮಾತನಾಡಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. ಸಂಸತ್‌ನಲ್ಲಿ ಅದಾನಿ ವಿರುದ್ಧ ಮಾತನಾಡಿದರೆ ನೋಟಿಸ್ ನೀಡುತ್ತಾರೆ. ಯಾವುದೇ ಪ್ರಕರಣ ದಾಖಲಿಸದೆ ನೋಟಿಸ್ ಕೊಡುವುದು ತಪ್ಪು. ಇದು ಸರ್ವಾ ಧಿಕಾರಿ ಧೋರಣೆಯಾಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಠಗಳಿಗೆ ಹೋಗಿ ಸ್ವಾಮೀಜಿಗಳ ಕಾಲಿಗೆ ಬಿದ್ದರೆ ಏನೂ ಆಗುವುದಿಲ್ಲ.
ಮಠಗಳ ಅಭಿವೃದ್ಧಿಗೆ ಅವರ ಕೊಡುಗೆ ಏನು ಎಂದು ಜನರಿಗೆ ತಿಳಿಸಬೇಕು. ಕಾಂಗ್ರೆಸ್‌ಗೆ ಬೇರೆ ಪಕ್ಷಗಳ ನಾಯಕರ ಸೇರ್ಪಡೆ ಮುಂದುವರಿಯಲಿದೆ. ಸ್ಥಳೀಯ ಕಾರ್ಯಕರ್ತರು, ನಾಯಕರ ಅಭಿಪ್ರಾಯ ಸಂಗ್ರಹಿಸಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಎಸ್.ಐ. ಚಿಕ್ಕನಗೌಡ್ರ ಪಕ್ಷ ಸೇರುವ ಕುರಿತು ನಾಯಕರೊಂದಿಗೆ ನಾನೇ ಮಾತನಾಡಿದ್ದೇನೆ. ಸ್ಥಳೀಯವಾಗಿ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದರು.
ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಟೀಕಿಸಿದ್ದರು. ಈಗ ಯಾವುದೇ ತುರ್ತು ಪರಿಸ್ಥಿತಿ ಇಲ್ಲ. ಆದರೆ, ಯಾವುದೇ ಗಂಭೀರ ಸ್ವರೂಪದ ಪ್ರಕರಣ ಇಲ್ಲದಿದ್ದರೂ ನವದೆಹಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಷ್ ಸಿಸೋಡಿಯಾ ಅವರನ್ನು ವರ್ಷಗಟ್ಟಲೇ ಜೈಲಿಗೆ ಹಾಕಿದ್ದು ಸರಿಯೇ?
– ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ