ನವದೆಹಲಿ: ದಶಕಗಳ ಹಿಂದಿನ ಬೋಫೋರ್ಸ್ ಬಹುಕೋಟಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ 2005ರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹಾಗೂ ಎಫ್ ಐಆರ್ ಅನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಸಿಬಿಐ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಹುಕೋಟಿ ಬೊಫೋರ್ಸ್ ಹಗರಣಕ್ಕೆ ಮತ್ತೆ ಮರುಜೀವ ಬರುವ ಸಾಧ್ಯತೆಯಿದ್ದು, ಪ್ರಕರಣದ ತನಿಖೆಯನ್ನು ಪುನರಾರಂಭ ಮಾಡಲು ಸಿಬಿಐ ಕೇಂದ್ರ ಸರ್ಕಾರದ ಅನುಮತಿ ಕೋರಿದೆ.
ಬೋಫೋರ್ಸ್ ಪ್ರಕರಣದಲ್ಲಿ ಯುರೋಪ್ ಮೂಲದ ಹಿಂದೂಜಾ ಸಹೋದರರ ವಿರುದ್ಧದ ಎಲ್ಲಾ ಆರೋಪವನ್ನು ದೆಹಲಿ ಹೈಕೋರ್ಟ್ 2005ರ ಮೇ 31ರಂದು ವಜಾಗೊಳಿಸಿತ್ತು. ಆ ನಿಟ್ಟಿನಲ್ಲಿ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಎಸ್ ಎಲ್ ಪಿ(ಸ್ಪೆಷಲ್ ಲೀವ್ ಪಿಟಿಷನ್) ಸಲ್ಲಿಸಲು ಅನುಮತಿ ನೀಡುವಂತೆ ಸಿಬಿಐ ಮನವಿ ಮಾಡಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಅಧಿಕಾರಿಗಳ ಪ್ರಕಾರ, 2005ರಲ್ಲಿ ಸಿಬಿಐ ಬೋಫೋರ್ಸ್ ಪ್ರಕರಣದಲ್ಲಿ ಎಸ್ ಎಲ್ ಪಿ ಸಲ್ಲಿಸಲು ಮುಂದಾಗಿತ್ತು, ಆದರೆ ಅಂದಿನ ಯುಪಿಎ ಸರ್ಕಾರ ಅದಕ್ಕೆ ಅನುಮತಿ ಕೊಟ್ಟಿರಲಿಲ್ಲವಾಗಿತ್ತು ಎಂದು ತಿಳಿಸಿದ್ದಾರೆ. ಏತನ್ಮಧ್ಯೆ ಇದೀಗ ಪ್ರಕರಣದ ಮರುತನಿಖೆ ನಡೆಸಲು ಸುಮಾರು 12 ವರ್ಷಗಳ ಬಳಿಕ ಅನುಮತಿ ಕೋರುತ್ತಿರುವ ಬಗ್ಗೆ ಸಿಬಿಐ ಸುದೀರ್ಘವಾದ ವಿವರಣೆಯನ್ನು ಕೊಡಬೇಕಾದ ಅನಿವಾರ್ಯತೆ ತಲೆದೋರಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.