ಕೋಲ್ಕತಾ: ನಾಗರಿಕ ಸಂಸ್ಥೆಗಳ ನೇಮಕಾತಿಯಲ್ಲಿನ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಶೋಧ ನಡೆಸಿದೆ. ಹಿರಿಯ ಸಚಿವ ಫಿರ್ಹಾದ್ ಹಕೀಮ್ ಮತ್ತು ಟಿಎಂಸಿ ಶಾಸಕ ಮದನ್ ಮಿತ್ರ ಅವರ ನಿವಾಸಗಳು ಸೇರಿದಂತೆ 12 ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರಾಭಿವೃದ್ಧಿ ಮತ್ತು ಪೌರಾಡಳಿತ ಖಾತೆ ಸಚಿವ ಹಕೀಮ್ ಅವರು ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದು, ಪಕ್ಷದ ಸಂಘಟನೆಯಲ್ಲಿ ಗಮನಾರ್ಹ ಹಿಡಿತ ಹೊಂದಿದ್ದಾರೆ.
ಸಿಬಿಐ ತಂಡವು ಕೇಂದ್ರ ಪಡೆಗಳ ದೊಡ್ಡ ತುಕಡಿಯೊಂದಿಗೆ ದಕ್ಷಿಣ ಕೋಲ್ಕತಾದ ಚೆಟ್ಲಾ ಪ್ರದೇಶದಲ್ಲಿ ಹಕೀಮ್ ಅವರ ನಿವಾಸವನ್ನು ಬೆಳಗ್ಗೆ ತಲುಪಿತ್ತು. ಇಬ್ಬರು ಸಿಬಿಐ ಅಧಿಕಾರಿಗಳು 9 ಗಂಟೆ ಸುಮಾರಿಗೆ ಹಕೀಮ್ ಅವರ ನಿವಾಸವನ್ನು ಪ್ರವೇಶಿಸಿ ಸಂಜೆ 6.30 ರವರೆಗೆ ಅವರನ್ನು ವಿಚಾರಣೆ ನಡೆಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
” ಅಕ್ರಮಗಳ ಬಗ್ಗೆ ಅವರಿಗೆ ಜ್ಞಾನವಿದೆಯೇ ಎಂದು ನಾವು ಅವರನ್ನು ಪ್ರಶ್ನಿಸಿದ್ದೇವೆ. ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಶೋಧ ಆರಂಭವಾಗುತ್ತಿದ್ದಂತೆ ಹಕೀಮ್ ಬೆಂಬಲಿಗರು ಅವರ ಮನೆಯ ಹೊರಗೆ ಜಮಾಯಿಸಿ ಪ್ರತಿಭಟನೆ ಆರಂಭಿಸಿದ್ದರು.
ಚೆಟ್ಲಾದಲ್ಲಿರುವ ಹಕೀಮ್ ಅವರ ನಿವಾಸದಿಂದ ಸುಮಾರು 3 ಕಿಮೀ ದೂರದಲ್ಲಿರುವ ಭವಾನಿಪೋರ್ ಪ್ರದೇಶದಲ್ಲಿನ ಉತ್ತರ 24 ಪರಗಣ ಜಿಲ್ಲೆಯ ಕಮರ್ಹಟಿಯ ಮಾಜಿ ಸಚಿವ ಮಿತ್ರ ಅವರ ನಿವಾಸದಲ್ಲೂ ಸಿಬಿಐ ತಂಡವು ಶೋಧಿಸಿದೆ.