ರೋಹಟಕ್ : ಭೂಹಂಚಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವ ಸಂಬಂಧ ಸಿಬಿಐ ಅಧಿಕಾರಿಗಳು ಇಂದು ಶುಕ್ರವಾರ ಬೆಳಗ್ಗೆ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ತಾಜಾ ವರದಿಗಳ ಪ್ರಕಾರ ಸಿಬಿಐ ದಿಲ್ಲಿ – ಎನ್‌ಸಿಆರ್ ವಲಯದಲ್ಲಿನ 30ಕ್ಕೂ ಅಧಿಕ ತಾಣಗಳ ಮೇಲೆ ದಾಳಿ ನಡೆಸುತ್ತಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಸಿಬಿಐ ಹೂಡ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿತ್ತು. 2005ರಲ್ಲಿ ಹರಿಯಾಣದ ಪಂಚಕುಲದಲ್ಲಿ ಎಜೆಎಲ್ ಗೆ ಸಾಂಸ್ಥಿಕ ಭೂ ಮರು ಹಂಚಿಕೆ ಮಾಡಲಾಗಿದ್ದುದರ ಸಂಬಂಧ ಹೂಡ ವಿರುದ್ಧ ಸಿಬಿಐ ಕೇಸು ದಾಖಲಿಸಿಕೊಂಡಿತ್ತು.
ಹೂಡ ಅವರು ಸಿಎಂ ಆಗಿದ್ದಾಗ ಭೂ ಹಂಚಿಕೆ ವಿಷಯದಲ್ಲಿನ ಅರ್ಹತೆಯ ನಿಯಮಗಳನ್ನು ಬದಲಾಯಿಸಿ ಪಂಚಕುಲದಲ್ಲಿನ 14 ಕೈಗಾರಿಕಾ ನಿವೇಶನಗಳನ್ನು ಚಿಕ್ಕಾಸಿನ ಬೆಲೆ ಹಂಚಲಾಗಿತ್ತು. ಇದುವೇ ಸಿಎಂ ಹೂಡ ಗೆ ಈಗ ಸಿಬಿಐ ಉರುಳಾಗಿದೆ ಎಂದು ಮೂಲಗಳು ತಿಳಿಸಿವೆ.