ನವದೆಹಲಿ: ದೇಶದ ವಿವಿಧ ಹಗರಣಗಳ ತನಿಖೆ ನಡೆಸುವ ಕೇಂದ್ರೀಯ ತನಿಖಾ ದಳ (ಸಿಬಿಐ) ಕಚೇರಿಯಲ್ಲೇ ನಡೆದ ಅವ್ಯವಹಾರವೊಂದು ಇದೀಗ ಬಯಲಾಗಿದೆ. ಸಿಬಿಐನಲ್ಲಿ ಸಾಫ್ಟ್ವೇರ್ ಪ್ರೋಗ್ರಾಮರ್ ಆಗಿರುವ ಅಜಯ್ ಗರ್ಗ್ ಎಂಬಾತ ರೈಲ್ವೆ ತತ್ಕಾಲ್ ಟಿಕೆಟ್ ಸಾಫ್ಟ್ವೇರನ್ನೇ ಹೋಲುವ ನಕಲಿ ಸಾಫ್ಟ್ವೇರ್ ನಿರ್ಮಿಸಿದ್ದ. ಇದರಿಂದ ರೈಲ್ವೆ ಏಜೆಂಟರುಗಳು ತತ್ಕಾಲ್ ಟಿಕೆಟ್ ನೀಡಿಕೆ ಆರಂಭವಾಗುತ್ತಿದ್ದಂತೆಯೇ ಎಲ್ಲ
ಟಿಕೆಟ್‌ಗಳನ್ನೂ ಖರೀದಿಸುತ್ತಿದ್ದರು.
ಇದರಿಂದ ಅಜಯ್ ಗರ್ಗ್ ಕೋಟ್ಯಾಂತರ ರೂಪಾಯಿ ಗಳಿಸಿದ್ದ. ಸದ್ಯ ಈ ಅಕ್ರಮ ಬಹಿರಂಗಗೊಂಡಿದ್ದು, ಗರ್ಗ್‌ನನ್ನು ಬಂಧಿಸಲಾಗಿದೆ.
ಹೇಗೆ ನಡೆಯುತ್ತಿತ್ತು ಅಕ್ರಮ?: ತತ್ಕಾಲ್ ಟಿಕೆಟ್ ಖರೀದಿ ಬೆಳಗ್ಗೆ 10 ಗಂಟೆಗೆ ಆರಂಭವಾಗುತ್ತದೆ. ರೈಲ್ವೆ ವೆಬ್‌ಸೈಟ್‌ನಲ್ಲಿ ಖರೀದಿ ಮಾಡುವುದಾದರೆ ಸೀಮಿತ ಸೀಟ್ ಗಳನ್ನಷ್ಟೇ ಬುಕ್ ಮಾಡಬಹುದಾಗಿರುತ್ತದೆ. ಅಲ್ಲದೆ ಇದಕ್ಕೆ ಕ್ಯಾಪಾc ಹಾಗೂ ಇತರ ಭ್ರದತಾ ವ್ಯವಸ್ಥೆಗಳೂ ಇದ್ದು, ಒಂದು ಟಿಕೆಟ್ ಬುಕ್ ಮಾಡಲು ಕನಿಷ್ಠ 10 ನಿಮಿಷವಾದರೂ ಬೇಕಿರುತ್ತದೆ. ಆದರೆ ಗರ್ಗ್ ರೂಪಿಸಿದ ಪ್ರತ್ಯೇಕ ಸಾಫ್ಟ್ವೇರ್ ಮೂಲಕ ಈ ಯಾವ ಅಡೆತಡೆ ಇರುವುದಿಲ್ಲ. 10 ಗಂಟೆಗೂ ಮೊದಲೇ ಏಜೆಂಟ್‌ಗಳಿಗೆ ಎಷ್ಟು ಟಿಕೆಟ್ ಬೇಡಿಕೆ ಇದೆಯೋ ಅವೆಲ್ಲದರ ವಿವರಗಳನ್ನೂ ಈ ಸಾಫ್ಟ್ವೇರ್‌ನಲ್ಲಿ ನಮೂದಿಸಲಾಗುತ್ತದೆ.
10 ಗಂಟೆಗೆ ಟಿಕೆಟ್ ಖರೀದಿಗೆ ಸರ್ವರ್ ಅನುವು ಮಾಡುತ್ತಿದ್ದಂತೆಯೇ ಈ ಸಾಫ್ಟ್ ವೇರ್‌ನಲ್ಲಿ ಭರ್ತಿ ಮಾಡಿರುವ ಎಲ್ಲ ಟಿಕೆಟ್ ಗಳೂ ಮೊದಲು ಬುಕ್ ಆಗುತ್ತವೆ. ಏಜೆಂಟ್ ಗಳು ಈ ಟಿಕೆಟ್‌ಗಳನ್ನು ಹೆಚ್ಚಿನ ದರಕ್ಕೆ ಮಾರುತ್ತವೆ.