ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಆಗಿದ್ದ ಯೋಗೀಶ್ ಗೌಡ ಗೌಡರ್ ಕೊಲೆ ಪ್ರಕರಣದ ಸಿಬಿಐ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಡಿ.16ರವರೆಗೆ ವಿಸ್ತರಿಸಿದೆ.
ಸಿಬಿಐ ತನಿಖೆ ರದ್ದು ಕೋರಿ ಪ್ರಕರಣದ ಆರೋಪಿ ಬಸವರಾಜ ಶಿವಪ್ಪ ಮುತ್ತಗಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಶಶಿಕಿರಣ ಶೆಟ್ಟಿ ವಾದ ಮಂಡಿಸಿ, ಸಿಬಿಐ ತನಿಖೆಗೆ 2019ರ ನ. 21ರಂದು ಮಧ್ಯಂತರ ತಡೆ ನೀಡಿದೆ. ಏತನ್ಮಧ್ಯೆ ಸಿಬಿಐ ಪೊಲೀಸರು ಆರೋಪಿ ಸಂತೋಷ ಸವದತ್ತಿ ಅಲಿಯಾಸ್ ಸ್ಯಾಂಡಿಯನ್ನು 20ರಂದು ಬಂಧಿಸಿ 21ರ ರಾತ್ರಿ 9.15ಕ್ಕೆ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ನಡೆ ಸರಿಯಿಲ್ಲ. ಈ ವಿಚಾರದಲ್ಲಿ ಹೈಕೋರ್ಟ್ ಆದೇಶಕ್ಕೆ ಅಗೌರವ ತೋರಲಾಗಿದೆ ಎಂದು ಹೇಳಿದರು.
ಇದನ್ನು ನಿರಾಕರಿಸಿದ ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್, ತನಿಖಾಧಿಕಾರಿಯು ಹೈಕೋರ್ಟ್ ಆದೇಶವನ್ನು ಮ್ಯಾಜಿಸ್ಟ್ರೇಟ್ ಗಮನಕ್ಕೆ ತಂದಿದ್ದಾರೆ. ಅಷ್ಟಕ್ಕೂ ಆರೋಪಿ ಜಾಮೀನು ಕೋರಿ ಅರ್ಜಿ ಹಾಕಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದ ಕಡತವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಧಾರವಾಡ ಜಿಲ್ಲಾ ಕೋರ್ಟ್ ಆಡಳಿತದ ಹೊಣೆ ಹೊತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಮುಂದೆ ಮಂಡಿಸಿ’ ಎಂದು ಆದೇಶಿಸಿತು.
ಇದೇ ವೇಳೆ ಸಿಬಿಐ ತನಿಖೆಗೆ ನೀಡಿದ್ದ ಮಧ್ಯಂತರ ತಡೆ ಆದೇಶವನ್ನು ಇದೇ 16ರವೆರಗೆ ವಿಸ್ತರಿಸಿದ ನ್ಯಾಯಪೀಠ ಆಕ್ಷೇಪಣೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.