Advertisement
2007ರಲ್ಲಿ ಪಂಜಾಬ್ – ಹರಿಯಾಣ ಹೈಕೋರ್ಟಿನ ಆದೇಶದ ಮೇರೆಗೆ ಕೇಸನ್ನು ಸಿಬಿಐಗೊಪ್ಪಿಸುವ ತನಕ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿರಲಿಲ್ಲ. ರಾಜಕೀಯ ಒತ್ತಡದಿಂದಾಗಿ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿತ್ತು. ಸಿಬಿಐಗೆ ಹಸ್ತಾಂತರವಾದ ಅನಂತರವೂ ಒತ್ತಡ ಮುಂದುವರಿದಿತ್ತು. ನ್ಯಾಯಾಲಯದ ಆದೇಶವಿದ್ದುದರಿಂದ ನಾರಾಯಣನ್ ಎದೆಗುಂದದೆ ತನಿಖೆ ಮುಂದುವರಿಸಿದರು.
ಇದಕ್ಕೆ ಸಮ್ಮತಿಸಿ ಒಳ ಹೋದ ಸಿಬಿಐ ತಂಡಕ್ಕೆ ಆಶ್ಚರ್ಯ ಕಾದಿತ್ತು. ಬಾಬಾ ರಾಂ ರಹೀಂನ ಗುಹೆಯಾವ ಪಂಚತಾರಾ ಹೊಟೇಲಿನ ಕೊಠಡಿಗೂ ಕಡಿಮೆಯಿರಲಿಲ್ಲ. ಎಲ್ಲ ಆಧುನಿಕ ಐಷಾರಾಮಗಳು ಅಲ್ಲಿದ್ದವು. ಅರ್ಧ ತಾಸು ಎಂದು ಹೇಳಿದ್ದ ರಾಂ ರಹೀಂನನ್ನು ನಾರಾಯಣನ್ ಇದೇ ಗುಹೆಯೊಳಗೆ ಬರೋಬ್ಬರಿ ಮೂರು ತಾಸಿಗೂ ಹೆಚ್ಚು ಹೊತ್ತು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ರಾಂ ರಹೀಂನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿದೆ ಎನ್ನುವುದು ಅವರಿಗೆ ಮನವರಿಕೆಯಾಗಿತ್ತಂತೆ. ತನಿಖೆಯುದ್ದಕ್ಕೂ ನಾರಾಯಣನ್ ಮೇಲೆ ವಿವಿಧೆಡೆಗಳಿಂದ ವಿಪರೀತ ಒತ್ತಡ ಇತ್ತು. ಆದರೆ ಯಾವುದಕ್ಕೂ ಸೊಪ್ಪು ಹಾಕದೆ ತನಿಖೆ ಮುಂದುವರಿಸಿದ ಪರಿಣಾಮವಾಗಿ ತಡವಾಗಿಯಾದರೂ ರಾಂ ರಹೀಂ ಕಂಬಿ ಎಣಿಸುವಂತಾಗಿದೆ. ಅತ್ಯಾಚಾರದ ದೂರು ದಾಖಲಿಸಿದ ಮಹಿಳೆಯನ್ನು ಪತ್ತೆಹಚ್ಚಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು ಈ ಪ್ರಕರಣದ ತನಿಖೆಯ ಪ್ರಮುಖ ಘಟ್ಟ ಎಂದು ನಾರಾಯಣನ್ ನೆನಪಿಸಿಕೊಂಡಿದ್ದಾರೆ.
Related Articles
Advertisement
ಉಪ್ಪಳ ಸಮೀಪ ಮುಳಿಂಜದವರಾದ ನಾರಾಯಣನ್ 1970ರಲ್ಲಿ ವಿದ್ಯಾನಗರ ಸರಕಾರಿ ಕಾಲೇಜಿನಿಂದ ವಿಜ್ಞಾನ ಪದವಿ ಪಡೆದ ಬಳಿಕ ಸಿಬಿಐಗೆ ಸೇರಿದರು. ನಿವೃತ್ತಿಯ ಬಳಿಕ ಅವರು ದಿಲ್ಲಿಯಲ್ಲಿ ಖಾಯಂ ವಾಸವಾಗಿದ್ದಾರೆ. ಆದರೆ ರಾಂ ರಹೀಂನನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸುವಾಗ ಅವರು ಹುಟ್ಟೂರಲ್ಲಿದ್ದರು. 2009ರಲ್ಲಿ ಸಿಬಿಐ ಜಂಟಿ ನಿರ್ದೇಶಕರಾಗಿ ಪದೋನ್ನತಿ ಪಡೆದು ನಿವೃತ್ತರಾಗಿರುವ ನಾರಾಯಣನ್ ಸೇವೆಯುದ್ದಕ್ಕೂ ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯಾ ಪ್ರಕರಣ, ಬಾಬರಿ ಕಟ್ಟಡ ನೆಲಸಮ, ಕಂದಹಾರ್ ವಿಮಾನ ಅಪಹರಣ, ಪಂಜಾಬ್ ಹಾಗೂ ಜಮ್ಮು- ಕಾಶ್ಮೀರದ ಭಯೋತ್ಪಾದನೆ ಪ್ರಕರಣಗಳು ಸೇರಿದಂತೆ ಹಲವು ಹೈಪ್ರೊಫೈಲ್ ಪ್ರಕರಣಗಳ ತನಿಖೆ ನಡೆಸಿದ ಹಿರಿಮೆ ಅವರಿಗಿದೆ.