ಲಕ್ನೋ : ಉನ್ನಾವೋ ಗ್ಯಾಂಗ್ ರೇಪ್ ಮತ್ತು ಕಸ್ಟಡಿ ಸಾವಿನ ಪ್ರಕರಣದ ಮುಖ್ಯ ಆರೋಪಿಯಾಗಿ ಬಂಧನಕ್ಕೆ ಗುರಿಯಾಗಿರುವ ಉತ್ತರ ಪದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಮತ್ತು ಆತನ ಸಹವರ್ತಿ ಶಶಿ ಸಿಂಗ್ ಅವರನ್ನು ಸಿಬಿಐ ಇಂದು ಹೆಚ್ಚಿನ ತನಿಖೆಗಾಗಿ ಉನ್ನಾವೋಗೆ ಒಯ್ಯುವ ಸಾಧ್ಯತೆ ಇದ್ದು ಸುಳ್ಳು ಪತ್ತೆ ಪರೀಕ್ಷೆಗೂ ಒಳಪಡಿಸುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇಬ್ಬರೂ ಆರೋಪಿಗಳನ್ನು ಸಿಬಿಐ, ಅಪರಾಧ ನಡೆದ ಉನ್ನಾವೋ ತಾಣಕ್ಕೆ ಒಯ್ದು ಅಲ್ಲಿ ಪ್ರಕರಣದ ಸಂತ್ರಸ್ತೆಯೊಂದಿಗೆ ಮುಖಾಮುಖೀ ಮಾಡಿಸುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.
ಇದೇ ವೇಳೆ ಸಿಬಿಐ, ಆರೋಪಿ ಬಿಜೆಪಿ ಶಾಸಕ ಸೇಂಗರ್ ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಕೋರ್ಟ್ ಅನುಮತಿಗಾಗಿ ಅರ್ಜಿ ಸಲ್ಲಿಸಲಿದೆ.
ಸಿಬಿಐ ಪ್ರಶ್ನಿಸಿದ ವೇಳೆ ಸೆಂಗರ್ ತನ್ನ ಹೇಳಿಕೆಗಳನ್ನು ನಿರಂತರವಾಗಿ ಬದಲಾಯಿಸುತ್ತಿದ್ದುದಾಗಿ ವರದಿಯಾಗಿದೆ. ವಿವಿಧ ತನಿಖಾ ದಳದ ವಿವಿಧ ಪ್ರಶ್ನೆಗಳಿಗೆ ಸೆಂಗರ್ ವಿಭಿನ್ನ ಉತ್ತರಗಳನ್ನು ನೀಡಿರುವುದಾಗಿ ವರದಿಗಳು ತಿಳಿಸಿವೆ.
ಆರೋಪಿ ಬಿಜೆಪಿ ಶಾಸಕನ ಗೂಂಡಾಗಳು ಉನ್ನಾವೋದಲ್ಲಿನ ಜನರಿಗೆ ಬಾಯಿ ಮುಚ್ಚಿಕೊಂಡಿರುವಂತೆ ಇಲ್ಲವೇ ಗ್ರಾಮ ಬಿಟ್ಟು ಹೋಗುವಂತೆ ಜೀವ ಬೆದರಿಕೆ ಒಡ್ಡುತ್ತಿರುವುದಾಗಿಯೂ ವರದಿಯಾಗಿದೆ.
ಕಳೆದ ವಾರ ಆರೋಪಿ ಬಿಜೆಪಿ ಶಾಸಕ ಸೆಂಗರ್‌ನನ್ನು ಸಿಬಿಐ ಬಂಧಿಸ 17 ತಾಸುಗಳ ಕಾಲ ಪ್ರಶ್ನಿಸಿ 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿತ್ತು.