Advertisement

DK Shivakumar ಹೂಡಿಕೆಯ ವಿವರಗಳನ್ನು ಕೋರಿ ಜೈಹಿಂದ್ ಚಾನೆಲ್‌ಗೆ ಸಿಬಿಐ ನೋಟಿಸ್

06:01 PM Dec 31, 2023 | Team Udayavani |

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾನೆಲ್‌ನಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ಕೋರಿ ಕೇರಳ ಮೂಲದ ಜೈಹಿಂದ್ ಚಾನೆಲ್‌ಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

Advertisement

ಶಿವಕುಮಾರ್ ಅವರ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿರುವ ಏಜೆನ್ಸಿಯ ಬೆಂಗಳೂರು ಘಟಕ ಜೈಹಿಂದ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ 2024 ಜನವರಿ 11 ರಂದು ತನಿಖಾಧಿಕಾರಿ ಕೋರಿದ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ತನ್ನ ಮುಂದೆ ಹಾಜರಾಗುವಂತೆ ಸೂಚಿಸಿದೆ.

CrPC ಯ ಸೆಕ್ಷನ್ 91 ರ ಅಡಿಯಲ್ಲಿ ಹೊರಡಿಸಲಾದ ತನ್ನ ನೋಟಿಸ್‌ನಲ್ಲಿ,ಡಿ.ಕೆ. ಶಿವಕುಮಾರ್, ಪತ್ನಿ ಉಷಾ ಅವರು ಮಾಡಿದ ಹೂಡಿಕೆಗಳು, ಅವರಿಗೆ ಪಾವತಿಸಿದ ಲಾಭಾಂಶಗಳು, ಷೇರು ವಹಿವಾಟುಗಳು, ಹಣಕಾಸಿನ ವಹಿವಾಟುಗಳ ಜತೆಗೆ ಬ್ಯಾಂಕ್ ವಿವರ, ಹಿಡುವಳಿಗಳ ಹೇಳಿಕೆ, ಅವರ ಲೆಡ್ಜರ್ ಖಾತೆಗಳು, ಒಪ್ಪಂದದ ಟಿಪ್ಪಣಿಗಳು ಮತ್ತು ಇತರ ವಿವರಗಳನ್ನು ಒದಗಿಸುವಂತೆ ಸಂಸ್ಥೆಯು ಚಾನಲ್‌ಗೆ ಸೂಚಿಸಿದೆ.

ಜೈಹಿಂದ್ ವ್ಯವಸ್ಥಾಪಕ ನಿರ್ದೇಶಕ, ಕೇರಳದ ಕಾಂಗ್ರೆಸ್ ನಾಯಕರಾಗಿರುವ ಬಿ.ಎಸ್.ಶಿಜು ಅವರು ಪ್ರತಿಕ್ರಿಯಿಸಿದ್ದು, ಸಿಬಿಐ ಸೂಚನೆಯನ್ನು ಸ್ವೀಕರಿಸಿದ್ದು, ತನಿಖಾ ಸಂಸ್ಥೆ ಕೋರಿರುವ ಎಲ್ಲಾ ದಾಖಲೆಗಳನ್ನು ಒದಗಿಸುತ್ತೇವೆ, ಎಲ್ಲಾ ದಾಖಲೆಗಳು ತಮ್ಮ ಬಳಿ ಇವೆ ಮತ್ತು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.

2013 ಮತ್ತು 2018 ರ ನಡುವೆ ಆದಾಯಕ್ಕೆ ಅನುಗುಣವಾಗಿರದ 74 ಕೋಟಿ ರೂ. ಗೂ ಹೆಚ್ಚು ಆಸ್ತಿಯನ್ನು ಗಳಿಸಿದ್ದಾರೆ ಎಂದು ಆರೋಪಿಸಿ ಶಿವಕುಮಾರ್ ವಿರುದ್ಧ ಸಿಬಿಐ 2020 ರಲ್ಲಿ ಪ್ರಕರಣ ದಾಖಲಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next