Advertisement

ಸಿಬಿಐ ತನಿಖೆ ಚುರುಕು

10:20 AM Sep 29, 2019 | Suhan S |

ಧಾರವಾಡ: ಸಿಬಿಐ ಅಧಿಕಾರಿಗಳು ಹೆಬ್ಬಳ್ಳಿ ಜಿಪಂ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖೆ ಆರಂಭಿಸಿದ್ದಾರೆ.

Advertisement

ಸಿಬಿಐ ಎಸ್‌ಪಿ ಥಾಮಸ್‌ ನೇತೃತ್ವದ ತಂಡ ಶುಕ್ರವಾರವಷ್ಟೇ ಹು-ಧಾ ಪೊಲೀಸ್‌ ಆಯುಕ್ತರ ಕಚೇರಿಗೆ ಭೇಟಿ ನೀಡಿ ಪ್ರಕರಣದ ಮಾಹಿತಿ ಸಂಗ್ರಹಿಸಿತ್ತು. ಶನಿವಾರ ಬೆಳಗ್ಗೆ ಧಾರವಾಡ ತಾಲೂಕಿನ ಗೋವನಕೊಪ್ಪದಲ್ಲಿನ ಯೋಗೀಶಗೌಡ ಗೌಡರ ತೋಟದ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ವರ್ಗದವರಿಂದ ಮಾಹಿತಿ ಕಲೆಹಾಕಿದೆ. ಯೋಗೀಶಗೌಡ ಗೌಡರ ಅವರ ಸಹೋದರ ಗುರುನಾಥಗೌಡ ಹಾಗೂ ಕುಟುಂಬದ ಇತರೆ ಸದಸ್ಯರನ್ನು ಮೂರು ತಾಸುಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ಘಟನೆ ನಡೆದ ದಿನಾಂಕ, ನಂತರದಲ್ಲಾದ ಬೆಳವಣಿಗೆಗಳು, ಈ ಹಿಂದೆ ನಡೆದ ವಿಚಾರಣೆ ಸೇರಿದಂತೆಇತರೆ ಬೆಳವಣಿಗೆಗಳ ಸಮಗ್ರ ಮಾಹಿತಿ ಪಡೆದಿದ್ದಾರೆ. ಬಳಿಕ ಯೋಗೀಶಗೌಡ ಅವರ ಪತ್ನಿ ಮಲ್ಲಪ್ಪ ಗೌಡರ ನಿವಾಸಕ್ಕೆ ತೆರಳಿದರು. ಆದರೆ ಮನೆಯಲ್ಲಿ ಯಾರೂ ಇರದ ಕಾರಣ ಮಾಹಿತಿ ಪಡೆಯದೇ ಅಲ್ಲಿಂದ ಮರಳಿದ್ದಾರೆ.

ನಂತರ ಇನ್ನೂ ಕೆಲವೆಡೆ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆಂದು ತಿಳಿದು ಬಂದಿದೆ. ನಗರದ ಸಪ್ತಾಪುರದ ಉದಯ ಜಿಮ್‌ನಲ್ಲಿ 2016ರ ಜೂ.15ರಂದು ಯೋಗೀಶಗೌಡ ಗೌಡರ ಅವರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತು. ರಾಜ್ಯ ಸರ್ಕಾರ ಪ್ರಕರಣವನ್ನು ಸೆ.6ರಂದು ಸಿಬಿಐಗೆ ವಹಿಸಿ ಆದೇಶ ಹೊರಡಿಸಿತ್ತು. ಇದಾದ ಬಳಿಕ ಕೊಲೆ ಪ್ರಕರಣ ಆರೋಪಿಗಳ ಮೇಲೆ ಸಿಬಿಐ ಅಧಿಕಾರಿಗಳು ಮೂರ್‍ನಾಲ್ಕು ದಿನಗಳ ಹಿಂದಷ್ಟೇ ಎಫ್ಐಆರ್‌ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next