ನವದೆಹಲಿ: ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ದೌರ್ಜನ್ಯ ಎಸಗಿರುವ ಪ್ರಕರಣವನ್ನು ಕೇಂದ್ರ ಸರ್ಕಾರ ಕೇಂದ್ರ ಗುಪ್ತಚರ ಸಂಸ್ಥೆಗೆ ತನಿಖೆಗೆ ವಹಿಸಲಿದೆ ಎಂದು ವರದಿಯಾಗಿದೆ.
ಮಣಿಪುರದಲ್ಲಿ ನಡೆದ ಈ ಘಟನೆ ಬಗ್ಗೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಮಾತನಾಡಬೇಕು ಎಂದು ವಿರೋಧ ಪಕ್ಷಗಳು ಸದನದಲ್ಲಿ ಪಟ್ಟು ಹಿಡಿದ ಬೆನ್ನಲ್ಲೇ ಕೇಂದ್ರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಇದರೊಂದಿಗೆ ಕಳೆದ ಮೂರು ತಿಂಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಗಲಭೆ ಪ್ರಕರಣಗಳ ವಿಚಾರಣೆಯನ್ನು ಈಶಾನ್ಯ ರಾಜ್ಯಗಳ ಹೊರಗೆ ನಡೆಸುವಂತೆ ಕೋರಿ ಸರ್ಕಾರ ಮನವಿ ಸಲ್ಲಿಸಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳ ವರದಿ ತಿಳಿಸಿದೆ.
ಬೆತ್ತಲೆ ಮೆರವಣಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕೆಲವು ಮಂದಿಯನ್ನು ಬಂಧಿಸಲಾಗಿದ್ದು ಘಟನೆಯ ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿಯನ್ನೂ ಬಂಧಿಸಲಾಗಿದ್ದು ಜೊತೆಗೆ ಆತನ ಸೆಲ್ ಫೋನ್ ಕೂಡ ಜಪ್ತಿ ಮಾಡಲಾಗಿದೆ.
ಮೇ 4 ರಂದು ಮಣಿಪುರದಲ್ಲಿ ಎರಡು ಬಣಗಳ ನಡುವೆ ಗಲಭೆ ನಡೆದ ನಂತರ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ವಿಡಿಯೋ ಬಿಡುಗಡೆಯಾದ ನಂತರ ದೇಶದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿದ್ದವು. ಮಣಿಪುರದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಶಮನಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವಿರೋಧ ಪಕ್ಷಗಳೂ ಪ್ರತಿಭಟನೆ ನಡೆಸಿದ್ದವು.
ಇದನ್ನೂ ಓದಿ: ಮಲೇರಿಯಾ: 48ರಲ್ಲಿ 21 ಪ್ರಕರಣ ಹೊರ ರಾಜ್ಯದ್ದು