ಚೆನ್ನೈ: ಸ್ವರ್ಣೋದ್ಯಮಿಗಳಾಗಿರುವ ನೀರವ್ ಮೋದಿ, ಮೆಹೂಲ್ ಚೋಸ್ಕಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ವಂಚಿಸಿದ ಬಳಿಕ ಮತ್ತೂಂದು ಚಿನ್ನಾಭರಣ ಮಳಿಗೆ ಎಸ್‌ಬಿಐ ಸೇರಿದಂತೆ 14 ಬ್ಯಾಂಕ್‌ಗಳಿಗೆ 1 ಸಾವಿರ ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಚೆನ್ನೈನ ಟಿ.ನಗರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಾನಿಷ್ಕ ಗೋಲ್ಡ್ ಪ್ರೈ.ಲಿಮಿಟೆಡ್ ಎಂಬ ಸಂಸ್ಥೆ ಮಾಡಿರುವ ಮೋಸದ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ಎಸ್‌ಬಿಐ ಜನವರಿಯಲ್ಲಿ ಮನವಿ ಮಾಡಿಕೊಂಡಿತ್ತು. ಭೂಪೇಶ್ ಕುಮಾರ್ ಜೈನ್ ಮತ್ತು ಅವರ ಪತ್ನಿ ನೀತಾ ಜೈನ್ ಅವರೇ ಈ ಕಂಪೆನಿಯ ಪ್ರವರ್ತಕರಾಗಿದ್ದಾರೆ. ಸದ್ಯ ಅವರು ಮಾರಿಷಿಯಸ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ.
ಕೇಸು ದಾಖಲಿಸಿದ ಸಿಬಿಐ: ಹದಿನಾಲ್ಕು ಬ್ಯಾಂಕ್‌ಗಳಿಗೆ ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಕಾನಿಷ್ಕಾ ಗೋಲ್ಡ್ ಪ್ರೈ.ಲಿ ವಿರುದ್ಧ ಸಿಬಿಐ ಬುಧವಾರ ಕೇಸು ದಾಖಲಿಸಿಕೊಂಡಿದೆ. ಜತೆಗೆ ಚೆನ್ನೈ ಸೇರಿದಂತೆ ಹಲವೆಡೆ ಶೋಧ ಕಾರ್ಯಾಚರಣೆ ನಡೆಸಿದೆ.
ಯಾವುದಿದು ಕಂಪೆನಿ?”ಕ್ರಿಜ್’ ಎಂಬ ಬ್ರಾಂಡ್ ನೇಮ್‌ನಲ್ಲಿ ಚಿನ್ನದ ಆಭರಣಗಳನ್ನು ಕಂಪೆನಿ ಉತ್ಪಾದಿಸುತ್ತಿತ್ತು. ಅದನ್ನು ವಿತರಕರ ಮೂಲಕ 2014ರ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಿತ್ತು. 2015ರಲ್ಲಿ ತನ್ನ ವಹಿವಾಟಿನ ಮಾದರಿಯನ್ನು ಬದಲಿಸಿತ್ತು.
2017ರ ನ.11ರಂದು ಈ ಸಂಸ್ಥೆ ಹಣಕಾಸು ವಂಚನೆ ನಡೆಸಿದೆ ಎಂದು ಎಸ್‌ಬಿಐ ಮೊದಲ ಬಾರಿಗೆ ಆರ್‌ಬಿಐಗೆ ವರದಿ ಸಲ್ಲಿಸಿತ್ತು. ಅದರ ಜತೆಗೆ ಇತರ ಬ್ಯಾಂಕ್‌ಗಳೂ ವರದಿ ನೀಡಿವೆ.
ಚಿನ್ನಾಭರಣ ಸಂಸ್ಥೆಯನ್ನು 2017ರ ಮಾರ್ಚ್ ನಲ್ಲಿ ಎಸ್‌ಬಿಐ ದಿವಾಳಿ ಎಂದು ಘೋಷಿಸಿತ್ತು. 2017ರ ಏಪ್ರಿಲ್ ವೇಳೆ ಕಾನಿಷ್ಕ ಸಂಸ್ಥೆ ಸಾಲ ಪಡೆದುಕೊಂಡ ಎಲ್ಲಾ 14 ಬ್ಯಾಂಕ್‌ಗಳಿಗೆ ಸಾಲ ಮರು ಪಾವತಿ ಮಾಡುವುದನ್ನು ನಿಲ್ಲಿಸಿತ್ತು. ಸಂಸ್ಥೆಯ ಪ್ರವರ್ತಕರನ್ನು ಸಂಪರ್ಕಿಸಲು ವಿಫಲಗೊಂಡ ಎಲ್ಲಾ ಬ್ಯಾಂಕ್‌ಗಳು ಅದೇ ವರ್ಷದ ಮೇ 25ರಂದು ಟಿ.ನಗರದಲ್ಲಿರುವ ಚಿನ್ನಾಭರಣ ಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ ನೀಡಿದವು. ಅಲ್ಲಿ ಯಾವುದೇ ವಾಣಿಜ್ಯಿಕ ಚಟುವಟಿಕೆ ಕಂಡುಬರಲಿಲ್ಲ.
ಅದೇ ದಿನ ಎಸ್‌ಬಿಐ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳಿಗೆ ಪತ್ರ ಬರೆದಿದ್ದ ಭೂಪೇಶ್ ಕುಮಾರ್ ಜೈನ್ ನಕಲಿ ದಾಖಲೆಗಳನ್ನು ನೀಡಿ ವಂಚಿಸಿದ್ದನ್ನು ಒಪ್ಪಿಕೊಂಡಿದ್ದರು. ಹೀಗಾಗಿ ಕಂಪೆನಿಯ ಇತರ ಶಾಖೆಗಳಿಗೆ ಭೇಟಿ ನೀಡಿದಾಗ ಅವುಗಳಿಗೆ ಬೀಗ ಹಾಕಲಾಗಿತ್ತು. ಈ ಬಗ್ಗೆ ಮಾತನಾಡಿರುವ ಮದ್ರಾಸ್ ಜ್ಯುವೆಲ್ಲರ್ಸ್ ಆ್ಯಂಡ್ ಡೈಮಂಡ್ ಮರ್ಚೆಂಟ್ಸ್ ಎಸೋಸಿಯೇಷನ್‌ನ ಪ್ರತಿನಿಧಿ 2017ರ ಮೇನಲ್ಲೇ ಕಾನಿಷ್ಕ ಕಂಪೆನಿ ನಷ್ಟ ಹೊಂದಿದ್ದರಿಂದ ವಹಿವಾಟು ಸ್ಥಗಿತಗೊಳಿಸಿತ್ತು ಎಂದು ಹೇಳಿದ್ದಾರೆ.
2007ರಿಂದಲೇ ಸಾಲ ಕೊಟ್ಟ ಬ್ಯಾಂಕ್‌ಗಳು
ಕಾನಿಷ್ಕಾ ಕಂಪೆನಿಗೆ 2007ರಿಂದಲೇ ಸಾಲ ನೀಡಿರುವ ಬಗ್ಗೆ ದಾಖಲೆ ಗಳಿಂದ ದೃಢಪಟ್ಟಿದೆ. ವರ್ಷಗಳು ಕಳೆದಂತೆ ಬ್ಯಾಂಕ್‌ಗಳೂ ಕೂಡ ಅದಕ್ಕೆ ನೀಡಲಾಗುತ್ತಿದ್ದ ಸಾಲದ ಮಿತಿಯನ್ನೂ ಹೆಚ್ಚಿಸಿದ್ದವು. ಸಾಲದ ಮತ್ತು ದುಡಿಯುವ ಬಂಡವಾಳದ ಮಿತಿಯನ್ನೂ ಹೆಚ್ಚಿಸಲಾಗಿತ್ತು. 2012ರಲ್ಲಿ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಗುಂಪು ಮೆಟಲ್ ಗೋಲ್ಡ್ ಲೋನ್ ಮೂಲಕ ನಿರ್ದಿಷ್ಟ ಬ್ಯಾಂಕ್‌ಗಳಿಂದ ಅಥವಾ ಮುಕ್ತ ಮಾರುಕಟ್ಟೆಯಿಂದ ಚಿನ್ನ ಖರೀದಿಗೂ ಅವಕಾಶ ಮಾಡಿಕೊಟ್ಟಿದ್ದವು.