ಹೊಸದಿಲ್ಲಿ : ರಾಷ್ಟ್ರೀಕೃತ ಕೆನರಾ ಬ್ಯಾಂಕಿನ ಮಾಜಿ ಸಿಎಂಡಿ ಆರ್ ಕೆ ದುಬೆ ಮತ್ತು ಇಬ್ಬರು ಮಾಜಿ ಕಾರ್ಯನಿವಾಹಕ ನಿರ್ದೇಶಕರಾದ ಎ ಕೆ ಗುಪ್ತಾ ಮತ್ತು ವಿ ಎಸ್ ಕೃಷ್ಣಕುಮಾರ್ ಅವರ ವಿರುದ್ಧ ಇಲ್ಲಿನ ತೀಸ್ ಹಜಾರಿ ನ್ಯಾಯಾಲಯದಲ್ಲಿ CBI ಚಾರ್ಜ್ ಶೀಟ್ ಸಲ್ಲಿಸಿದೆ.
ಆರೋಪಿಗಳು ಬ್ಯಾಂಕಿನ ಹಣವನ್ನು ತಮ್ಮ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಬೋಗಸ್ ಕಂಪೆನಿಗಳಿಗಾಗಿ ನುಂಗಿ ಹಾಕಿರುವುದಾಗಿ ಚಾರ್ಜ್ ಶೀಟ್‌ನಲ್ಲಿ ತಿಳಿಸಲಾಗಿದೆ.
ಇದೇ ಪ್ರಕರಣದಲ್ಲಿ ಸಿಬಿಐ ಒಕೇಶನಲ್ ಸಿಲ್ವರ್ ಕಂಪೆನಿ ಲಿಮಿಟೆಡ್ ನ ಇಬ್ಬರು ನಿರ್ದೇಶಕರಾದ ಕಪಿಲ್ ಗುಪ್ತಾ ಮತ್ತು ರಾಜ್ ಕುಮಾರ್ ಗುಪ್ತಾ ಎಂಬವರ ವಿರುದ್ಧವೂ ಚಾರ್ಜ್ ಶೀಟ್ ದಾಖಲಿಸಿದೆ.
ವಜ್ರ ಮತು ಚಿನ್ನಾಭರಣಗಳ ಸಗಟು ವ್ಯಾಪಾರದಲ್ಲಿ ತೊಡಗಿಕೊಂಡಿರುವ ಒಕೇಶನಲ್ ಸಿಲ್ವರ್ ಪ್ರೈವೇಟ್ ಲಿಮಿಟೆಡ್ (ಒಪಿಎಸ್‌ಎಲ್) ನ ಉನ್ನತ ಅಧಿಕಾರಿಗಳು ಮತ್ತು ಕೆನರಾ ಬ್ಯಾಂಕ್ ಮಾಜಿ ಸಿಎಂಡಿ ಆರ್ ಕೆ ದುಬೆ ಅವರ ನಡುವೆ ನೇರ ಸಂಪರ್ಕ ಇತ್ತೆಂಬುದಕ್ಕೆ ಸಾಕ್ಷ್ಯಗಳನ್ನು ಪತ್ತೆ ಹಚ್ಚಿರುವುದಾಗಿ ಕ್ರೈಮ್ ಬ್ಯೂರೋ ಹೇಳಿದೆ.
ಕಪಿಲ್ ಗುಪ್ತಾ ಮತ್ತು ರಾಜ್ ಕುಮಾರ್ ಗುಪ್ತಾ ಅವರಿಗೆ ದುಬೆ ಅವರ ನೇರ ಸಂಪರ್ಕವಿದ್ದು ಆ ನೆಲೆಯಲ್ಲಿ ಬ್ಯಾಂಕಿನಿಂದ ಸಾಲ ಪಡೆಯುತ್ತಿದ್ದರು. ಸಾಲ ಮಂಜೂರು ಮಾಡುವಾಗ ಕಮಲಾ ನಗರ ಮೂಲದ ಕಂಪೆನಿಗೆ ಅನುಕೂಲ ಮಾಡಿಕೊಡುವಂತೆ ಸಿಎಂಡಿ ತನ್ನ ಅಧೀನ ಅಧಿಕಾರಿಗಳಿಗೆ ಕಳುಹಿಸಿದ್ದ ಟಿಪ್ಪಣಿ ಸಂದೇಶಗಳು ತನ್ನ ಬಳಿ ಇವೆ ಎಂದು ಸಿಬಿಐ ಹೇಳಿದೆ.