ಮುಂಬಯಿ: ಸುಮಾರು 10 ವರ್ಷಗಳ ಹಿಂದೆ ನಡೆದ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ನಟ ಸೂರಜ್ ಪಾಂಚೋಲಿ (32) ಅವರನ್ನು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
ನಟಿ ಜಿಯಾ ಖಾನ್ ಅವರು 2013ರ ಜೂನ್ 3ರಂದು ಮುಂಬೈನ ಜುಹುನಲ್ಲಿರುವ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಜಿಯಾ ಬರೆದಿದ್ದಾಳೆ ಎನ್ನಲಾದ ಆರು ಪುಟಗಳ ಡೆತ್ನೋಟ್ ಆಧಾರದ ಮೇಲೆ ಸೂರಜ್ ಪಾಂಚೋಲಿಯನ್ನು ಬಂಧಿಸಿದ್ದರು. ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಗಾಗಿ ಪ್ರಕರಣ ದಾಖಲಿಸಿದರು.
ಸಿಬಿಐನ ವಿಶೇಷ ತನಿಖಾ ದಳಕ್ಕೆ ಪ್ರಕರಣವನ್ನು ವರ್ಗಾಯಿಸಬೇಕು ಜಿಯಾ ಖಾನ್ ಅವರ ತಾಯಿ ರಬಿಯಾ ಮಾಡಿದ ಮನವಿಯನ್ನು ಮುಂಬೈ ಹೈಕೋರ್ಟ್ ತಿರಸ್ಕರಿಸಿತು.
ಜಿಯಾ ಖಾನ್ ಅವರ ತಾಯಿ ರಬಿಯಾ ಅವರ ನಿರಂತರ ಮನವಿ ಹಾಗೂ ಪ್ರಕರಣ ಸಂಬಂಧ ಮುಂಬೈ ಹೈಕೋರ್ಟ್ 2014ರ ಜು. 3ರಂದು ನೀಡಿದ್ದ ನಿರ್ದೇಶನದಂತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಎ. 20ರಂದು ಅಂತಿಮ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ಇದೀಗ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಎಸ್ ಸಯ್ಯದ್, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸೂರಜ್ ಪಾಂಚೋಲಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ಆದೇಶಿಸಿದ್ದಾರೆ.