Advertisement

CBI: ಸಿಬಿಐ ಮುಕ್ತ ತನಿಖೆಯ ಅನುಮತಿ ಅಧಿಸೂಚನೆ ಹಿಂಪಡೆದ ರಾಜ್ಯ ಸಚಿವ ಸಂಪುಟ!

05:39 PM Sep 26, 2024 | Team Udayavani |

ಬೆಂಗಳೂರು: ಸಿಬಿಐ (CBI) ತನಿಖಾ ದಳಕ್ಕೆ ರಾಜ್ಯದಲ್ಲಿ ಮುಕ್ತ ಅನುಮತಿ ನೀಡಿರುವ ಅಧಿಸೂಚನೆ ವಾಪಸ್‌ ಪಡೆಯಲು ಗುರುವಾರ (ಸೆ.26) ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್‌(HK Patil)  ತಿಳಿಸಿದ್ದಾರೆ.

Advertisement

ಮುಖ್ಯವಾಗಿ ಚುನಾವಣೆಗೂ ಮೊದಲು ಭಾರತೀಯ ಜನತಾ ಪಕ್ಷ ವಿಪಕ್ಷಗಳ ನಾಯಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ನೀಡುವ ಸೂಚನೆಯಂತೆ ಸಿಬಿಐ ಕಾರ್ಯಪ್ರವೃತ್ತವಾಗುತ್ತದೆ ಎಂದು ಪಾಟೀಲ್‌ ಆರೋಪಿಸಿದರು.

ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಿಬಿಐ ಮುಕ್ತವಾಗಿ ತನಿಖೆ ನಡೆಸಲು ಈ ಹಿಂದೆ ಸರ್ಕಾರ ಅನುವು ಮಾಡಿಕೊಟ್ಟಿತ್ತು.

ಆದರೆ ನಾವೀಗ ರಾಜ್ಯದಲ್ಲಿ ಸಿಬಿಐಗೆ ನೀಡಿರುವ ಮುಕ್ತ ತನಿಖೆಯ ಅವಕಾಶವನ್ನು ಹಿಂಪಡೆದಿದ್ದೇವೆ. ಕೇಂದ್ರ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ನಾವು ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೇವೆ. ಸಿಬಿಐ ಪಕ್ಷಪಾತಿ…ಹೀಗಾಗಿ ನಾವು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸಚಿವ ಪಾಟೀಲ್‌ ಹೇಳಿದರು.

Advertisement

ಇದು ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಕೈಗೊಂಡ ನಿರ್ಧಾರವಲ್ಲ ಎಂದು ಎಚ್.ಕೆ.ಪಾಟೀಲ್‌ ತಿಳಿಸಿದರು. ನಾವು ಎಲ್ಲಾ ಪ್ರಕರಣವನ್ನು ಸಿಬಿಐಗೆ ಶಿಫಾರಸು ಮಾಡಿದ್ದೇವು. ಆದರೆ ಅವರು ಆರೋಪಪಟ್ಟಿಯನ್ನೇ ಈವರೆಗೂ ಸಲ್ಲಿಸಿಲ್ಲ. ಹಲವು ಪ್ರಕರಣಗಳು ಬಾಕಿ ಇದೆ. ನಾವು ಶಿಫಾರಸು ಮಾಡಿದ ಪ್ರಕರಣಗಳ ತನಿಖೆ ನಡೆಸಲು ನಿರಾಕರಿಸುತ್ತಿದೆ ಎಂದು ಪಾಟೀಲ್‌ ಹೇಳಿದರು.

ಈಗಾಗಲೇ ಸಿಬಿಐ ಮುಕ್ತ ತನಿಖೆ ಅವಕಾಶ ರದ್ದುಗೊಳಿಸಿದ ವಿಪಕ್ಷ ಆಡಳಿತ ಇರುವ ಪಶ್ಚಿಮಬಂಗಾಳ, ತಮಿಳುನಾಡು, ಕೇರಳ ರಾಜ್ಯದ ಸಾಲಿಗೆ ಕರ್ನಾಟಕ ಸೇರಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next