Advertisement

ಬ್ಯಾಂಕುಗಳಿಗೆ 2,240 ಕೋಟಿ ರೂ. ವಂಚನೆ: ಸಿಬಿಐನಿಂದ ನಾಲ್ವರು ಅರೆಸ್ಟ್

06:10 PM Apr 12, 2017 | udayavani editorial |

ಹೊಸದಿಲ್ಲಿ : ಬ್ಯಾಂಕ್‌ ಕೂಟಕ್ಕೆ ಸುಮಾರು 2,240 ಕೋಟಿ ರೂ. ವಂಚಿಸಿರುವ ಆರೋಪದ ಮೇಲೆ ಬಂಧಿತರಾಗಿದ್ದ  ಸೂರ್ಯ ವಿನಾಯಕ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ‌ ನಾಲ್ವರು ನಿರ್ದೇಶಕರನ್ನು ದಿಲ್ಲಿ ಯ ನ್ಯಾಯಾಲಯವೊಂದು ಇಂದು ಬುಧವಾರ ಹತ್ತು ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿತು. 

Advertisement

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಕೊಟ್ಟಿರುವ ದೂರಿನ ಪ್ರಕಾರ ಸಿಬಿಐನಿಂದ ಬಂಧಿತರಾಗಿದ್ದ  ಸಂಜಯ್‌ ಜೈನ್‌, ರಾಜೀವ್‌ ಜೈನ್‌‌, ರೋಹಿತ್‌ ಚೌಧರಿ ಮತ್ತು ಸಂಜೀವ್‌ ಅಗ್ರವಾಲ್‌ ಅವರನ್ನು ಚೀಫ್ ಜ್ಯುಡೀಶಿಯಲ್‌ ಮ್ಯಾಜಿಸ್ಟ್ರೇಟ್‌ ಸುಮಿತ್‌ ದಾಸ್‌ ಅವರು ಎಪ್ರಿಲ್‌ 22ರ ತನಕ 10 ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದರು. 

ನೂರಕ್ಕೂ ಹೆಚ್ಚು ಶೆಲ್‌ (ನಕಲಿ) ಕಂಪೆನಿಗಳನ್ನು ಸೃಷ್ಟಿಸಿ ಅವುಗಳ ಮೂಲಕ ಬ್ಯಾಂಕ್‌ ಹಣವನ್ನು ಅಕ್ರಮವಾಗಿ ರವಾನಿಸುವ ಮತ್ತು ವರ್ಗಾಯಿಸುವ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದ ಈ ನಾಲ್ವರನ್ನು ಸಿಬಿಐ ಇಂದು ಬೆಳಗ್ಗೆಯಷ್ಟೇ ಬಂಧಿಸಿತ್ತು. 

ಸೂರ್ಯ ವಿನಾಯಕ ಇಂಡಸ್ಟ್ರೀಸ್‌ ಮತ್ತು ನಕಲಿ ಕಂಪೆನಿಗಳ ನಡುವೆ ಯಾವುದೇ ಸಾಚಾ ಔದ್ಯಮಿಕ ವಹಿವಾಟು ಇರಲಿಲ್ಲ. ಆರೋಪಿಗಳಾದ ನಾಲ್ವರು ನಿರ್ದೇಶಕರು ಪಂಜಾಬ್‌ ನ್ಯಾಶನಲ್‌ ಬ್ಯಾಂಕಿನ 2,240 ಕೋಟಿ ರೂ.ಗಳನ್ನು ಅಕ್ರಮವಾಗಿ ವಿದೇಶಗಳಿಗೆ ರವಾನಿಸಿ ಬ್ಯಾಂಕ್‌ ಕೂಟಕ್ಕೆ ಭಾರೀ ನಷ್ಟ ಉಂಟುಮಾಡಿದ್ದರು. 300 ಕೋಟಿ ರೂ.ಮೀರಿದ ಕಾರ್ಯ ಬಂಡವಾಳವನ್ನು ಈ ಆರೋಪಿಗಳು ವಿದೇಶದಲ್ಲಿರುವ ಆರು ನಕಲಿ ಕಂಪೆನಿಗಳಿಗೆ ವರ್ಗಾಯಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next