ಮುಂಬೈ: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಮುಂಬರುವ ಚಿತ್ರ ‘ಪಠಾಣ್’ ಚಿತ್ರದ ಹಾಡು ಇತ್ತೀಚೆಗೆ ಬಹುದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹಾಡಿನಲ್ಲಿ ದೀಪಿಕಾ ತೊಟ್ಟಿದ್ದ ಉಡುಪಿನ ಕಾರಣದಿಂದ ಹಲವು ವಿರೋಧಗಳು ಕೇಳಿ ಬಂದಿದ್ದವು. ಚಿತ್ರವನ್ನು ಬ್ಯಾನ್ ಮಾಡುವ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಜನರು ಮಾತನಾಡಿಕೊಂಡಿದ್ದರು.
ಆದರೆ ಇದೀಗ ಚಿತ್ರದಲ್ಲಿ ಮತ್ತು ಹಾಡಿನಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಲು ಮತ್ತು ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸಲು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ ಸಿ) ನಿರ್ಮಾಪಕರಿಗೆ ಸಲಹೆ ನೀಡಿದೆ ಎಂದು ಅಧ್ಯಕ್ಷ ಪ್ರಸೂನ್ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ:Watch Video: ನಿರ್ಮಾಣ ಹಂತದ ಭಾರತದ ಮೊದಲ “ವರ್ಟಿಕಲ್ ಲಿಫ್ಟ್ ಪಂಬನ್ ರೈಲ್ವೆ ಸೇತುವೆ”
ಹಾಡುಗಳನ್ನು ಒಳಗೊಂಡಂತೆ ಚಿತ್ರದಲ್ಲಿ ಬದಲಾವಣೆಗಳನ್ನು ಅಳವಡಿಸಲು ಮತ್ತು ಥಿಯೇಟರಿಕಲ್ ಬಿಡುಗಡೆಗೆ ಮೊದಲು ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸಲು ಸಮಿತಿಯು ತಯಾರಕರಿಗೆ ಮಾರ್ಗದರ್ಶನ ನೀಡಿದೆ. ಸೃಜನಾತ್ಮಕ ಅಭಿವ್ಯಕ್ತಿ ಮತ್ತು ಪ್ರೇಕ್ಷಕರ ಸಂವೇದನೆಯ ನಡುವೆ ಸರಿಯಾದ ಸಮತೋಲನವನ್ನು ಇರಿಸಲು ಸಿಬಿಎಫ್ ಸಿ ಯಾವಾಗಲೂ ಬದ್ಧವಾಗಿದೆ ಎಂದು ಜೋಶಿ ಹೇಳಿದರು.
ಜಾನ್ ಅಬ್ರಹಾಂ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನದ ‘ಪಠಾಣ್ ’ 2023 ರ ಜನವರಿಯಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ.