ಕೋಟ: ಅಲ್ಲಿ ಊರೆಲ್ಲ ಮದುವೆಯ ಸಂಭ್ರಮವಿತ್ತು. ಮದುವೆ ಮನೆಗೆ ಆಗಮಿಸಿದ ವಧುವನ್ನು ವರನ ಕಡೆಯವರು ಖುಷಿ-ಖುಷಿಯಲ್ಲಿ ಬರಮಾಡಿಕೊಂಡರು.
ಮಾಂಗಲ್ಯಂ ತಂತುನಾನೇನಾ.. ಮಂತ್ರ ಶುರುವಾಗುತ್ತಲೇ ವರನಾಗಿ ಶೃಂಗಾರಗೊಂಡಿದ್ದ ವೃಕ್ಷರಾಜ ಅಶ್ವತ್ಥ ಮರಕ್ಕೂ ವಧುವಾಗಿ ಕಂಕಣ , ಸೀರೆ ತೊಟ್ಟ ಬೇವಿನ ಮರಕ್ಕೂ ಮದುವೆ ನೆರವೇರಿತು.
ಹೌದು, ಹೀಗೊಂದು ವೃಕ್ಷ ರಾಜ ಅಶ್ವತ್ಥ ಹಾಗೂ ಬೇವಿನ ಮರದ ವಿಶೇಷವಾದ ಉಪನಯನ ಹಾಗೂ ವಿವಾಹಕ್ಕೆ ಶುಕ್ರವಾರ ಸಾಲಿಗ್ರಾಮದ ಕಾರ್ಕಡ ಪಡುಹೋಳಿಯ ಮಹಾವಿಷ್ಣು ದೇವಸ್ಥಾನ ಸಾಕ್ಷಿಯಾಯಿತು.
ಮದುವೆಗೆ ಮೊದಲು ಅಶ್ವತ್ಥ ವೃಕ್ಷಕ್ಕೆ ಉಪನಯನ ನಡೆಯಿತು. ವಿವಾಹದಲ್ಲಿ ಹಿಂದೂ ಸಂಸ್ಕಾರದಂತೆ ಕರ್ಮಗಳು, ಹೋಮ ಹವನ ನಡೆದವು, ಮಾಂಗಲ್ಯಧಾರಣೆ, ಕನ್ಯಾ ದಾನಗಳು ಪುರೋಹಿತ ಸುದರ್ಶನ ಐತಾಳರ ಪೌರೋಹಿತ್ಯದಲ್ಲಿ ನಡೆಯಿತು. ಊರಿನ ಹಿರಿಯರು ವದುವಿನ ಕಡೆ ಯವರಾಗಿ ಧಾರೆ ಎರೆದುಕೊಟ್ಟರು. ಕೊನೆಯಲ್ಲಿ ಮದುವೆಗೆ ಆಗಮಿಸಿದ ಎಲ್ಲರಿಗೂ ಭರ್ಜರಿ ಊಟದ ವ್ಯವಸ್ಥೆಯಾಯಿತು.
ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಬಂದರೆ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ಮನಸ್ಸಿನ ಕಾಮನೆಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಉಪನಯನ ಹಾಗೂ ವಿವಾಹವಾದ ಮೇಲೆ ಅಶ್ವತ್ಥ ವೃಕ್ಷದ ಶಕ್ತಿ, ತೇಜಸ್ಸು ಇನ್ನಷ್ಟು ವೃದ್ಧಿಯಾಗಿ ದೈವಿ ಶಕ್ತಿ ಪ್ರಾಪ್ತಿ ಯಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಈ ವೃಕ್ಷಕ್ಕೆ ಬೇವಿನ ಮರದೊಂದಿಗೆ ಮದುವೆ ನೆರವೇರಿಸುತ್ತಾರೆ.