Advertisement

Cauvery Water ತಮಿಳುನಾಡಿಗೆ ಕಾವೇರಿ ನೀರು: ನಾಳೆ ಸರ್ವಪಕ್ಷ ಸಭೆ

11:54 PM Jul 12, 2024 | Team Udayavani |

ಬೆಂಗಳೂರು: ತಮಿಳುನಾಡಿಗೆ ಪ್ರತಿ ದಿನ 1 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಜತೆಗೆ ಜುಲೈ 14ರಂದು ಸರ್ವಪಕ್ಷ ಸಭೆ ನಡೆಸಿ ಮುಂದಿನ ನಡೆಯನ್ನು ತೀರ್ಮಾನಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಈ ಸಂಬಂಧ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ವಾಡಿಕೆ ಮಳೆ ಆಗುವುದೆಂಬ ಹವಾಮಾನ ಮುನ್ಸೂಚನೆ ಇದ್ದರೂ ಈ ವರೆಗೆ ಶೇ.28 ಒಳಹರಿವಿನ ಕೊರತೆ ಇದೆ. ಇದನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದೆ ಸ್ಪಷ್ಟವಾಗಿ ಹೇಳಿದ್ದೆವು. ಜತೆಗೆ ಜುಲೈ ಅಂತ್ಯದ ವರೆಗೆ ಯಾವುದೇ ತೀರ್ಮಾನ ಮಾಡದಂತೆ ಮನವಿ ಮಾಡಿದ್ದೆವು. ಆದರೂ ಅವರು ಜುಲೈ 12ರಿಂದ ಪ್ರತಿ ದಿನ ಒಂದು ಟಿಎಂಸಿ ನೀರು ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಕಾವೇರಿ ಜಲಾನಯನ ಪ್ರದೇಶದ ಹಿತಾಸಕ್ತಿಗಾಗಿ ಸರಕಾರ ಹೋರಾಟ ಮಾಡಲಿದೆ ಎಂದರು.

ಸರಕಾರ ಈ ಆದೇಶದ ವಿರುದ್ಧ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಬೇಕೆಂಬ ಅಭಿಪ್ರಾಯ ಇಂದಿನ ಸಭೆಯಲ್ಲಿ ವ್ಯಕ್ತವಾಗಿದೆ. ಜುಲೈ 14ರಂದು ಸಂಜೆ 4ಕ್ಕೆ ಸರ್ವಪಕ್ಷ ಸಭೆ ನಡೆಸಲು ತೀರ್ಮಾನಿಸಲಾಯಿತು.

ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿ
19 ಟಿಎಂಸಿ ನೀರಿನ ಕೊರತೆ: ಡಿಕೆಶಿ
ಬೆಂಗಳೂರು: ಕಾವೇರಿ ಜಲಾನಯನದ ಪ್ರಮುಖ ಅಣೆಕಟ್ಟುಗಳಲ್ಲಿ ಸರಾಸರಿ ಶೇ. 62 ಮಾತ್ರ ನೀರಿನ ಲಭ್ಯತೆಯಿದೆ. ಸುಮಾರು 19 ಟಿಎಂಸಿಯಷ್ಟು ನೀರಿನ ಕೊರತೆ ಕಂಡು ಬಂದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾವೇರಿ ನೀರಿನ ವಿಚಾರವಾಗಿ ನಡೆದ ಸಭೆಯ ಅನಂತರ ಮಾತನಾಡಿ, ಹಾರಂಗಿ ಶೇ.73, ಹೇಮಾವತಿ ಶೇ.55, ಕೆ.ಆರ್‌.ಎಸ್‌ ಶೇ.54, ಕಬಿನಿಯಲ್ಲಿ ಶೇ. 96 ರಷ್ಟು ನೀರಿನ ಪ್ರಮಾಣವಿದೆ. ಕಳೆದ ವರ್ಷ ಸಾಕಷ್ಟು ಕೊರತೆ ಉಂಟಾಗಿತ್ತು. ನಾಲ್ಕು ವರ್ಷಗಳ ಹಿಂದೆ ಸಮೃದ್ಧವಾಗಿ ಮಳೆಯಾದ ಕಾರಣ ಕೊರತೆ ಕಂಡು ಬಂದಿರಲಿಲ್ಲ ಎಂದರು.

Advertisement

ಕಬಿನಿಯಿಂದ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆಯೇ ಎಂದಾಗ ಕಬಿನಿಯು ಶೇ.96 ರಷ್ಟು ತುಂಬಿದ್ದು ಅಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ಒಳಹರಿವಿನ ಪ್ರಮಾಣದಷ್ಟೇ ನೀರನ್ನು ಹೊರಗೆ ಬಿಡಲಾಗುತ್ತಿದೆ ಎಂದು ಹೇಳಿದರು.

ನಮಗೆ ಮಳೆ ಕೊರತೆ ಉಂಟಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ 1 ಟಿಎಂಸಿ ನೀರು ಹರಿಸಬೇಕು ಎಂದು ಹೇಳಿದೆ. ನಾನು ದೆಹಲಿಯಲ್ಲಿ ಇರುವ ವಕೀಲರಾದ ಮೋಹನ್‌ ಕಾತರಕಿ, ಶ್ಯಾಮ್‌ ದಿವಾನ್‌ ಅವರ ಬಳಿ ಮಾತನಾಡಿದ್ದೇನೆ. ಅವರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

ತುರ್ತು ಪರಿಸ್ಥಿತಿ…
ಬಿಜೆಪಿಯಿಂದ ಸಂವಿಧಾನ ಹತ್ಯಾ ದಿನ ಆಚರಣೆಯ ಘೋಷಣೆ ಬಗ್ಗೆಕೇಳಿದಾಗ, ತುರ್ತು ಪರಿಸ್ಥಿತಿಯ ಅನಂತರವೂ ಈ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತ ನಡೆಸಿದೆ. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಪಿ.ವಿ.ನರಸಿಂಹರಾವ್‌, ಮನಮೋಹನ್‌ ಸಿಂಗ್‌ ಅವರು ಪ್ರಧಾನಿಗಳಾಗಿದ್ದರು. ಈ ದೇಶದ ಜನತೆ ಕಾಂಗ್ರೆಸ್‌ ಪಕ್ಷದ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next