Advertisement

ಕಾವೇರಿ ಪಾಲೆಷ್ಟು? ಇಂದು ಸುಪ್ರೀಂಕೋರ್ಟ್‌ನಲ್ಲಿ ಅಂತಿಮ ತೀರ್ಪು

06:00 AM Feb 16, 2018 | Team Udayavani |

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಕಾನೂನು ಹೋರಾಟ ತಾರ್ಕಿಕ ಅಂತ್ಯಕ್ಕೆ ತಲುಪಿದ್ದು, ನ್ಯಾಯಾಧಿಕರಣದ ತೀರ್ಪು ಪ್ರಶ್ನಿಸಿ ಕರ್ನಾಟಕ ಸೇರಿ ಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪು ಶುಕ್ರವಾರ ಹೊರಬೀಳಲಿದೆ.

Advertisement

ಸುಪ್ರೀಂಕೋರ್ಟ್‌ ಮುಖ್ಯ ನ್ಯಾ. ದೀಪಕ್‌ ಮಿಶ್ರಾ, ನ್ಯಾ. ಅಮಿತಾವ್‌ ರಾಯ್‌ ಮತ್ತು ನ್ಯಾ.ಎ.ಎಂ.ಕಾನ್ವಿಲ್ಕರ್‌ವುಳ್ಳ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಲಿದ್ದು, ಶತಮಾನಗಳ ವಿವಾದಕ್ಕೆ ಇತಿಶ್ರೀ ಹಾಡುವುದೇ ಎಂಬುದನ್ನು ಕಾದುನೋಡಬೇಕಾಗಿದೆ.

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕಾವೇರಿ ನ್ಯಾಯಾಧಿಕರಣ 2007ರಲ್ಲಿ ನೀಡಿದ್ದ ಅಂತಿಮ ಆದೇಶ ಪ್ರಶ್ನಿಸಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿವೆ. ಕಳೆದ ತಿಂಗಳಷ್ಟೇ ವಿಚಾರಣೆ ಅಂತ್ಯಗೊಳಿಸಿದ್ದ ಪೀಠ, ತೀರ್ಪು ಕಾಯ್ದಿರಿಸಿತ್ತು.

ಈ ಮಧ್ಯೆ ಕಾವೇರಿ ತೀರ್ಪು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಅತ್ಯಂತ ಮಹತ್ವದ್ದಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ತೀರ್ಪು ಹೊರಬಿದ್ದ ಮೇಲೆ ಪರಿಸ್ಥಿತಿ ನಿಭಾಯಿಸುವುದು ಎರಡೂ ರಾಜ್ಯಗಳ ಪಾಲಿಗೆ ಸವಾಲಿನ ಪ್ರಶ್ನೆಯಾಗಿದೆ.

2007ರ ಫೆ. 5ರಂದು ತೀರ್ಪು ನೀಡಿದ್ದ ನ್ಯಾಯಾಧಿಕರಣ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ಮತ್ತು ಪಾಂಡಿಚೇರಿಗೆ 7 ಟಿಎಂಸಿ ನೀರು ಹಂಚಿಕೆ ಮಾಡಿತ್ತು. ಕರ್ನಾಟಕ ಪ್ರತಿ ವರ್ಷ  ತಮಿಳುನಾಡಿಗೆ 192 ಟಿಎಂಸಿ ನೀರನ್ನು ಹಂತ ಹಂತವಾಗಿ ಬಿಡಬೇಕು ಎಂದು ಹೇಳಿತ್ತು. ಅಲ್ಲದೆ, ಕಾವೇರಿ ಕೊಳ್ಳದಲ್ಲಿ ಮಳೆ ಕಡಿಮೆ ಬಿದ್ದ ವರ್ಷಗಳಲ್ಲಿ ನೀರು ಹಂಚಿಕೆ ಪ್ರಮಾಣವನ್ನೂ ಮಳೆಯ ಪ್ರಮಾಣಕ್ಕೆ ತಕ್ಕಂತೆ ಕಡಿಮೆ ಮಾಡಿಕೊಳ್ಳಬಹುದು. ಜತೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಮೇಲುಸ್ತುವಾರಿ ಸಮಿತಿ ರಚಿಸಬೇಕು ಎಂದು ಆದೇಶಿಸಿತ್ತು. ಈ ತೀರ್ಪನ್ನು ಕಾವೇರಿ ಕೊಳ್ಳದ ನಾಲ್ಕೂ ರಾಜ್ಯಗಳು ವಿರೋದಿಸಿದ್ದು, ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದೆ.

Advertisement

ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ಕರ್ನಾಟಕವು, ಬೆಂಗಳೂರಿನ ನೀರಿನ ಬೇಡಿಕೆ ಪೂರೈಸುವುದು ಸೇರಿದಂತೆ ರಾಜ್ಯಕ್ಕೆ ಹೆಚ್ಚು ನೀರು ಕೇಳಿದೆ. ಅಲ್ಲದೆ ಕಾವೇರಿ ನೀರು ನಿರ್ವಹಣಾ ಪ್ರಧಿಕಾರ ರಚನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪ ಎತ್ತಿದ್ದು, ಇದರಿಂದ ರಾಜ್ಯದ ಜಲಾಶಯಗಳ ನಿರ್ವಹಣೆ ಬೇರೆಯವರ ಪಾಲಾಗುತ್ತದೆ ಎಂದು ಹೇಳಿದೆ.

ನ್ಯಾಯಾಧಿಕರಣದ ಅಂತಿಮ ಆದೇಶದ ಬಳಿಕ ಪ್ರತಿ ವರ್ಷ ಕಾವೇರಿ ಕೊಳ್ಳದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿರುವ ಕರ್ನಾಟಕ ತನಗೆ ಅನ್ಯಾಯವಾದಲೂ ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ನೀರು ಬಿಡುತ್ತಲೇ ಬಂದಿದೆ. ಹೀಗಾಗಿ ಕರ್ನಾಟಕಕ್ಕೆ ಇದು ಕೊನೆಯ ಅವಕಾಶವಾಗಿದ್ದು, ನಾಳೆಯೂ ನ್ಯಾಯ ಸಿಗದಿದ್ದರೆ ಮತ್ತೆ ಸಮಸ್ಯೆ ಬಿಗಡಾಯಿಸಲಿದೆ. ಹೀಗಾಗಿ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ತೀರ್ಪು ಕರ್ನಾಟಕದ ಹಣೆಬರಹ ನಿರ್ಧರಿಸಲಿದ್ದು, ಈ ತೀರ್ಪಿನ ನಂತರ ಮರುಪರಿಶೀಲನಾ ಅರ್ಜಿಯೊಂದೇ ಕರ್ನಾಟಕದ ಪಾಲಿಗೆ ಉಳಿಯುವ ಒಂದು ಆಶಾಕಿರಣ.

ತಮಿಳುನಾಡು ವಾದ:
ನ್ಯಾಯಾಧಿಕರಣ ತಮಿಳುನಾಡಿಗೆ 419 ಟಿಎಂಸಿ ನೀರು ಹಂಚಿಕೆ ಮಾಡಿದ್ದು, ಕರ್ನಾಟಕ ಪ್ರತಿ ವರ್ಷ 192 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಹೇಳಿದೆ. ಆದರೆ, 192 ಟಿಎಂಸಿ ನೀರಿನ ಪ್ರಮಾಣ ಹೆಚ್ಚಿಸಬೇಕು. ಅಲ್ಲದೆ, ಕಾವೇರಿ ನೀರಿಗಾಗಿ ತಮಿಳುನಾಡನ್ನು ಕರ್ನಾಟಕದ ಮುಂದೆ ಭಿಕ್ಷೆ ಕೇಳುವಂತೆ ಮಾಡಬೇಡಿ. ಪ್ರತಿ ವರ್ಷ ಕರ್ನಾಟಕ ನಿಗದಿತ ನೀರು ನೀಡುವುದಿಲ್ಲ. ಆದ್ದರಿಂದ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮೂಲಭೂತ ಬದಲಾವಣೆ ಮಾಡಬೇಕು. ನೀರಿನ ಹಂಚಿಕೆಗೆ ಸಂಬಂಧಿಸಿ ಕೇಂದ್ರ ಸರ್ಕಾರವನ್ನು ಅವಲಂಬಿಸದಂತೆ ನ್ಯಾಯಾಂಗ ಆದೇಶ ಬೇಕು ಎಂದು ಕೋರಿದೆ. ಅಲ್ಲದೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಲೇ ಬೇಕು ಎಂದು ಪಟ್ಟುಹಿಡಿದಿದೆ.

ಕರ್ನಾಟಕದ ವಾದ:
ತಮಿಳುನಾಡಿಗೆ ವಾರ್ಷಿಕ 192 ಟಿಎಂಸಿ ನೀರನ್ನು ಪ್ರತಿ ತಿಂಗಳು ಇಂತಿಷ್ಟು ಬಿಡಬೇಕು ಎಂಬ ನ್ಯಾಯಾಧಿಕರಣದ ತೀರ್ಪು ಸಮಂಜಸವಲ್ಲ. ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಇಲ್ಲದಿರುವಾಗ ನೀರು ಬಿಡಲು ಹೇಗೆ ಸಾಧ್ಯ? ನ್ಯಾಯಾಧಿಕರಣ ಬೆಂಗಳೂರಿನ ನೀರಿನ ಬೇಡಿಕೆ ಬಗ್ಗೆ ಪರಿಗಣಿಸಿಲ್ಲ. ಅಲ್ಲದೆ, ಕಾವೇರಿ ಕಣಿವೆಯಲ್ಲಿ ಕರ್ನಾಟಕ ಕೇವಲ ಮುಂಗಾರು ಮಳೆ ಅವಲಂಬಿಸಿದರೆ, ತಮಿಳುನಾಡು ಹಿಂಗಾರು ಮಳೆ ಅವಲಂಬಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಪ್ರತಿಬಾರಿ ಕೈಕೊಡುತ್ತಿದೆ. ಹೀಗಾಗಿ ಮಳೆ ಕೊರತೆಯಾದಾಗ ತಮಿಳುನಾಡಿನಲ್ಲಿ ಹಿಂಗಾರಿನಲ್ಲಿ ಬೀಳುವ ಮಳೆ ಆಧರಿಸಿ ನೀರಿನ ಮರುಹಂಚಿಕೆ ಮಾಡಬೇಕು.

1924ರ ಮದ್ರಾಸ್‌ ಒಪ್ಪಂದ ಮೀರಿ ತಮಿಳುನಾಡು ಈಗಾಗಲೇ 21.38 ಲಕ್ಷದಿಂದ 28.2 ಲಕ್ಷ ಎಕರೆಗೆ ಹೆಚ್ಚಿಸಿಕೊಂಡಿದ್ದು, 566 ಟಿಎಂಸಿ ನೀರು ಬಳಕೆ ಮಾಡುತ್ತಿದೆ. ಈ ಕಾರಣಕ್ಕಾಗಿ ಅದು ಹೆಚ್ಚುವರಿ ನೀರು ಕೇಳುತ್ತಿದೆ. ಅದರಂತೆ ನೀರು ಬಿಟ್ಟರೆ ಕರ್ನಾಟಕದಲ್ಲಿ ಕೃಷಿ ಚಟುವಟಿಕೆಗಳ ಜತೆಗೆ ಕುಡಿಯುವ ನೀರಿಗೂ ಸಮಸ್ಯೆಯಾಗಲಿದೆ.  ಕಾವೇರಿ ನ್ಯಾಯಾಧಿಕರಣ ತೀರ್ಪುನೀಡುವಾಗ 1991ರ ಜನಗಣತಿಯನ್ನು ಆಧರಿಸಿ ಬೆಂಗಳೂರಿಗೆ ಕುಡಿಯುವ ನೀರು ನಿಗದಿಪಡಿಸಿದೆ. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ 2011ರ ಜನಗಣತಿಯ ಮಾಹಿತಿಗಳನ್ನು ಆಧರಿಸಿ ಬೆಂಗಳೂರಿಗೆ ನೀರು ಹಂಚಿಕೆ ಮಾಡಬೇಕು.

ಕರ್ನಾಟಕದಲ್ಲಿ ಕಾವೇರಿ ಕೊಳ್ಳದ ವ್ಯಾಪ್ತಿಗೆ 34,273 ಚದರ ಕಿ.ಮೀ. ಪ್ರದೇಶ ಬರುತ್ತದೆ. ಈ ಪೈಕಿ ಮೂರನೇ ಎರಡರಷ್ಟು ಭಾಗವು ಬರಪೀಡಿತವಾಗಿದೆ. ತಮಿಳುನಾಡಿನಲ್ಲಿರುವ ಕಾವೇರಿ ಕೊಳ್ಳದ ಮೂರನೇ ಒಂದರಷ್ಟು ಪ್ರದೇಶ ಮಾತ್ರ ಬರಪೀಡಿತವಾಗಿದೆ. ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಕಾವೇರಿ ನದಿ ನೀರಿನಿಂದಲೇ ಕೃಷಿ ಚಟುವಟಿಕೆ ನಡೆಸುವ ಅನಿವಾರ್ಯತೆಯಿದೆ. ಕಾವೇರಿ ಕೊಳ್ಳ ವ್ಯಾಪ್ತಿಯ ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ತಮಿಳುನಾಡಿನಲ್ಲಿ ಅಂತರ್ಜಲಮಟ್ಟ ಉತ್ತಮವಾಗಿದೆ ಎಂಬುದು ಕರ್ನಾಟಕದ ವಾದ.

ಕರ್ನಾಟಕದ ಆತಂಕ
– ನೀರು ನಿರ್ವಹಣಾ ಪ್ರಾಧಿಕಾರ ರಚನೆ ಮಾಡಿದರೆ ರಾಜ್ಯದ ಜಲಾಶಯಗಳ ಮೇಲಿನ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ.
– ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಹೆಚ್ಚುವರಿ ನೀರು ಹಂಚಿಕೆ ಮಾಡದಿದ್ದಲ್ಲಿ ಮುಂದೆ ನೀರಿನ ಸಮಸ್ಯೆ ತೀವ್ರಗೊಳ್ಳಲಿದೆ.
– ನ್ಯಾಯಾಧಿಕರಣದ ಆದೇಶದಂತೆ ತಿಂಗಳಿಗೆ ಇಂತಿಷ್ಟು ನೀರು ಎಂಬುದು ಅಂತಿಮವಾದರೆ ಮಳೆ ಕೊರತೆಯಾದಾರೂ ನೀರು ಬಿಡಬೇಕು. ಇಲ್ಲವಾದರೆ ನ್ಯಾಯಾಂಗ ನಿಂದನೆಯಾಗುತ್ತದೆ.

ಶಾಂತಿ-ಸುವ್ಯವಸ್ಥೆ ಕಾಪಾಡಲು ಕ್ರಮ: ಜಿ.ರಾಧಿಕಾ
ಮಂಡ್ಯ :
ಸುಪ್ರೀಂಕೋರ್ಟಿನಿಂದ ಕಾವೇರಿ ತೀರ್ಪು ಶುಕ್ರವಾರ ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ ತಿಳಿಸಿದರು.

ಸುಮಾರು 50ಕ್ಕೂ ಹೆಚ್ಚು ಸ್ಟ್ರೈಕಿಂಗ್‌ ಪಾರ್ಟಿ ಜಿಲ್ಲೆಗೆ ಬರುತ್ತಿವೆ. ಜೊತೆಗೆ ಹೊರಜಿಲ್ಲೆಗಳಿಂದ ಸುಮಾರು 500ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳು ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದು, ಮಂಡ್ಯ ನಗರ, ಕೃಷ್ಣರಾಜಸಾಗರ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಬಳಿ ಯಾವುದೇ ಪ್ರತಿಭಟನೆ, ಸತ್ಯಾಗ್ರಹ ನಡೆಸದಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಸರ್‌.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಮಾತ್ರ ಶಾಂತಿಯುತವಾಗಿ ಚಳವಳಿ ನಡೆಸಲು ಅವಕಾಶ ಮಾಡಿಕೊಡಲಾಗುವುದು.

ಶಾಂತಿ ಕದಡುವ, ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡುವ ಹಾಗೂ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಈಗಾಗಲೇ ಸಂಬಂಧಿಸಿದವರಿಗೆ ಸೂಕ್ತ ತಿಳುವಳಿಕೆ ನೀಡಲಾಗಿದೆ. ಒಂದು ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳು ಪ್ರಯತ್ನ ಮಾಡಿದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನ್ಯಾಯಾಧಿಕರಣದ ಐತೀರ್ಪು
2007ರ ಫೆ.5 ರಂದು ಕಾವೇರಿ ನ್ಯಾಯಾಧಿಕರಣದಿಂದ ಅಂತಿಮ ತೀರ್ಪು ಪ್ರಕಟ. ತಮಿಳುನಾಡಿಗೆ 419 ಟಿಎಂಸಿ ನೀಡಲು ಆದೇಶ. ಈ ಮೂಲಕ ಕರ್ನಾಟಕಕ್ಕೆ ವರ್ಷಕ್ಕೆ 192 ಟಿಎಂಸಿ ನೀರು ಹರಿಸಬೇಕಾದ ಅನಿವಾರ್ಯತೆ. ತೀರ್ಪಿನ ಬಗ್ಗೆ ಎರಡೂ ರಾಜ್ಯಗಳಿಂದ ಆಕ್ಷೇಪ.

ಐತೀರ್ಪಿನ ವಿವರ
ತಮಿಳುನಾಡು – 419 ಟಿಎಂಸಿ
ಕರ್ನಾಟಕ – 270 ಟಿಎಂಸಿ
ಕೇರಳ -30 ಟಿಎಂಸಿ
ಪುದುಚೇರಿ – 7 ಟಿಎಂಸಿ
ಸಾಮಾನ್ಯ ವರ್ಷ
ಪ್ರತಿ ವರ್ಷ ಕರ್ನಾಟಕ 192 ಟಿಎಂಸಿ ನೀರು ಬಿಡಬೇಕು
ಕೊರತೆಯ ವರ್ಷ
ನಾಲ್ಕು ರಾಜ್ಯಗಳಿಗೆ ನಿಗದಿ ಮಾಡಿರುವ ನೀರಿನಲ್ಲಿ ಕಡಿಮೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next